ಬೆಂಗಳೂರು (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ಮುಗಿದಿದ್ದು, ಇದೀಗ ರಾಜ್ಯ ಸರಕಾರ ಡಿಪ್ಲೋಮಾ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ದಿನಾಂಕ ಘೋಷಿಸಿದೆ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಡಿಪ್ಲೋಮಾ ಅಂತಿಮ ಸೆಮಿಸ್ಟರ್ ಪರೀಕ್ಷೆಯನ್ನು ಸೆಪ್ಟೆಂಬರ್ 7 ರಿಂದ 28ರವರೆಗೆ ನಡೆಸುವುದಾಗಿ ತಿಳಿಸಿದೆ. ಬ್ಯಾಕ್‍ಲಾಗ್ ಪರೀಕ್ಷೆಗಳನ್ನೂ ಕೂಡ ಅದೇ ದಿನ ನಡೆಸುವುದಾಗಿ ಇಲಾಖೆ ಘೋಷಿಸಿದೆ.
ಪರೀಕ್ಷೆ ಕುರಿತ ವಿವರಗಳನ್ನು ಇಲಾಖೆಯು ವೆಬ್ ಪೋರ್ಟಲ್ ಮತ್ತು www.dtek.karnataka.gov.in ನಲ್ಲಿ ತಿಳಿಸಲಾಗಿದೆ. ಪರೀಕ್ಷೆಗಳನ್ನು ಈ ಹಿಂದೆ ಜುಲೈ 15 ರಿಂದ ಆಗಸ್ಟ್ 8 ರವರೆಗೆ ನಡೆಸುವುದಾಗಿ ನಿರ್ಧರಿಸಲಾಗಿತ್ತು. ಲಾಕ್‍ಡೌನ್ ಪರಿಣಾಮ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಇದೀಗ ಪರೀಕ್ಷೆ ಬರೆಯಲು ಇಲಾಖೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಹತ್ತಿರ ಇರುವ ಸರಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ. ಈಗಾಗಲೇ ಪ್ರಾಕ್ಟಿಕಲ್ ಎಕ್ಸಾಮ್‍ಗಳನ್ನು ರದ್ದುಗೊಳಿಸಲಾಗಿದ್ದು, ಒಂದು ವೇಳೆ ಅನಾರೋಗ್ಯದಿಂದಾಗಿ ಅಥವಾ ಕೊರೋನಾ ಲಕ್ಷಣಗಳಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೇ ಹೋದಲ್ಲಿ ಮುಂದೆ ಬರೆಯುವ ಪರೀಕ್ಷೆಗಳಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಈ ವೇಳೆ ಮೊದಲ ಬಾರಿ ಬರೆದ ಪರೀಕ್ಷೆಯೆಂದೇ ಅದನ್ನು ಪರಿಗಣಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಇಲಾಖೆ ತಿಳಿಸಿದೆ.
ಈ ನಡುವೆ ಎರಡನೇ ಹಾಗೂ ನಾಲ್ಕನೆ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಲಾಗಿದ್ದು, ಹಿಂದಿನ ಸೆಮಿಸ್ಟರ್‍ಗಳಲ್ಲಿ ಬರೆದ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲಾಗುತ್ತದೆ. ಸಂಜೆ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂಟರ್ನಲ್ ಅಂಕಗಳ ಮೂಲಕ ಅಂಕಗಳನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
0 comments:
Post a Comment