ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಡಿಕೆಶಿ ಮೊದಲ ಭೇಟಿ : ಕಾರ್ಯಕರ್ತರಲ್ಲಿ ಗರಿಗೆದರಿದ ಹುಮ್ಮಸ್ಸು
ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ರಾಜ್ಯದಲ್ಲಿ ವ್ಯಾಪಕವಾಗಿರುವ ಈ ಸಂದಿಗ್ದ ಪರಿಸ್ಥಿತಿಯಲ್ಲೂ ಬಿಜೆಪಿ ನಾಯಕರು ಹೆಣದ ಮೇಲೆ ಹಣ ಮಾಡಲು ಹೊರಟಿದ್ದಾರೆ. ಈ ರಾಜ್ಯಕ್ಕೆ ಕೊರೋನಾಕ್ಕಿಂತಲೂ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಆಡಳಿತವೇ ದೊಡ್ಡ ಶಾಪ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಸರಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ ಅವರು ನಗರದ ಡಿಸಿಸಿ ಕಛೇರಿಯಲ್ಲಿ ಸುದ್ದಿಗಾರರ ಜೊತೆ ಮಾಡಿದರು.
ಸುಮಾರು 2 ಸಾವಿರ ಕೋಟಿ ರೂಪಾಯಿ ಅಕ್ರಮ ಮಾಡಿರುವ ಬಗ್ಗೆ ನಾನು ಹಾಗೂ ವಿರೋಧ ಪಕ್ಷದ ನಾಯಕರು ಸಾಕ್ಷಿ ಸಮೇತ ಜನರ ಮುಂದಿಟ್ಟು ಲೆಕ್ಕ ಕೊಡಿ, ಉತ್ತರ ಕೊಡಿ ಎಂದು ಕೇಳಿದ್ದೇವೆ. ಮಾಧ್ಯಮಗಳೂ ಕೂಡಾ ಈ ಬಗ್ಗೆ ಗಂಭೀರ ವರದಿಗಳನ್ನು ಪ್ರಕಟಿಸಿ ಜನರ ಮುಂದೆ ಬಯಲಾಗಿಸಿದೆ. ಆದರೂ ಇದುವರೆಗೂ ಸರಕಾರವಾಗಲೀ, ಬಿಜೆಪಿ ಸಚಿವರುಗಳಾಗಲೀ ತುಟಿ ಪಿಟಕ್ಕೆನ್ನುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು ಇವರದೇ ಪಕ್ಷದ ಕೇಂದ್ರ ಸರಕಾರ ಕೂಡಾ ಲಕ್ಷಾಂತರ, ಸಾವಿರಾರು ರೂಪಾಯಿ ಪ್ಯಾಕೇಜ್ ಘೋಷಿಸುತ್ತಿದೆ ಹೊರತು ಅವುಗಳನ್ನು ಎಲ್ಲಿ ಹಂಚಿಕೆ ಮಾಡಲಾಗಿದೆ ಎಂಬುದನ್ನು ಜನತೆಗೆ ತಿಳಿಸಬೇಕಾದ ಅನಿವಾರ್ಯತೆ ಇದೆ. ಇದ್ಯಾವುದನ್ನೂ ಮಾಡದ ಬಿಜೆಪಿ ನಾಯಕರು ಸರಕಾರ ಜನರಿಗೆ ಹಂಚಿಕೆ ಮಾಡುವ ಆಹಾರ ಕಿಟ್‍ಗಳನ್ನೂ ಕೂಡಾ ತಮ್ಮ ವೈಯುಕ್ತಿಕ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಸರಕಾರದ ಆಹಾರ ಕಿಟ್‍ಗಳ ಮೇಲೆ ಬಿಜೆಪಿ ನಾಯಕರು, ಶಾಸಕರು, ಸಚಿವರುಗಳು ತಮ್ಮ ಫೋಟೋ ಬಳಸಿ ಪ್ರಚಾರಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಎಲ್ಲಿಯಾದರೂ ತನಿಖೆ, ಕ್ರಮ ಜರುಗಿದೆಯಾ ಎಂದವರು ಪ್ರಶ್ನಿಸಿದರು.
ಪ್ರತಿಪಕ್ಷವಾಗಿ ಕೊರೋನಾ ಸಂದರ್ಭ ನಾವು ಎಲ್ಲ ರೀತಿಯಿಂದಲೂ ಸರಕಾರಕ್ಕೆ ಸಹಕಾರ ನೀಡಿದ್ದೇವೆ, ಅಂದ ಮಾತ್ರಕ್ಕೆ ಭ್ರಷ್ಟಾಚಾರಕ್ಕೆ ಸಹಕಾರ ನೀಡೋದಕ್ಕೆ ಆಗೋದಿಲ್ಲ ಎಂದ ಶಿವಕುಮಾರ್ ಲಕ್ಷಾಂತರ ರೂಪಾಯಿ ಘೋಷಣೆಯಾಗಿರುವ ಪ್ಯಾಕೇಜ್‍ಗಳು ಯಾವಾಗ ಕೊಡೋದು ಸತ್ತ ಮೇಲಾ ಎಂದು ಪ್ರಶ್ನಿಸಿದ ಅವರು ಗವರ್ನಮೆಂಟೂ ಇಲ್ಲ ಗವರ್ನನ್ಸೂ ಇಲ್ಲ ಎಂದು ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ ಕೆ ಸಲೀಂ, ಮಾಜಿ ಸಚಿವ ಬಿ ರಮಾನಾಥ ರೈ, ಶಾಸಕರಾದ ಯು ಟಿ ಖಾದರ್, ಕೆ ಹರೀಶ್ ಕುಮಾರ್, ಮಾಜಿ ಶಾಸಕ ಐವನ್ ಡಿ’ಸೋಜ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment