ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ
ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೋನಾ ಸಂದಿಗ್ದತೆಯ ನಡುವೆ ಸಾವಿರಾರು, ಲಕ್ಷಾಂತರ ಕೋಟಿ ರೂಪಾಯಿ ಪ್ಯಾಕೇಜ್ ಬರೇ ಘೋಷಣೆಗೆ ಸೀಮಿತಗೊಳಿಸುವ ಬಿಜೆಪಿ ಸರಕಾರ ಜನರ ಸಂಕಷ್ಟದ ಸಮಯದಲ್ಲಿ ಜನರಿಗೆ ಯಾವ ರೀತಿ ನೆರವಾಗಬೇಕು ಎಂಬ ಬಗ್ಗೆ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಅವರ ಸಾಲಮೇಳದಂತಹ ಜನಪರ ಕಾರ್ಯಕ್ರಮಗಳನ್ನು ಮಾದರಿಯಾಗಿ ಅಳವಡಿಸಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಲಹೆ ನೀಡಿದರು.
ಬಂಟ್ವಾಳದಲ್ಲಿರುವ ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಪೂಜಾರಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಾರ್ದನ ಪೂಜಾರಿ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ, ಸಂಸದರಾಗಿ, ಕೇಂದ್ರದ ಸಚಿವರಾಗಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಸ್ತಿಯಾಗಿ ಕಾರ್ಯನಿರ್ವಹಿಸಿದವರು. ಅವರು ನಮ್ಮೆಲ್ಲರ ನಾಯಕರು, ಅವರ ಸಲಹೆ ಇಂದಿಗೂ ಪಕ್ಷಕ್ಕೆ ಹಾಗೂ ನಮಗೆ ಸದಾ ಬೇಕಾಗಿದೆ ಎಂದರು.
ಪೂಜಾರಿ ಅವರ ಮನೆಯಲ್ಲೇ ಭೇಟಿ ಮಾಡಿದ ಡಿಕೆಶಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರಲ್ಲದೆ, ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆಯೂ ಮಾತುಕತೆ ನಡೆಸಿದರು ಎನ್ನಲಾಗಿದೆ.
ಈ ಸಂದರ್ಭ ಮಾಜಿ ಸಚಿವ ಬಿ ರಮಾನಾಥ ರೈ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಂಗಳೂರು ಶಾಸಕ ಯು ಟಿ ಖಾದರ್, ಡಿಸಿಸಿ ಅಧ್ಯಕ್ಷ ಹರೀಶ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉಪಾಧ್ಯಕ್ಷ ಲುಕ್ಮಾನ್ ಬಿ ಸಿ ರೋಡು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಜೆ ಆರ್ ಲೋಬೋ, ಐವನ್ ಡಿ’ಸೋಜ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಜಿ ಪಂ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಎಂ ಎಸ್ ಮುಹಮ್ಮದ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಡಿಸಿಸಿ ಉಪಾಧ್ಯಕ್ಷ ಉಮರ್ ಫಾರೂಕ್ ಫರಂಗಿಪೇಟೆ ಮೊದಲಾದವರು ಜೊತೆಗಿದ್ದರು. ಬಂಟ್ವಾಳಕ್ಕೆ ಬಂದಿಳಿದ ಡಿಕೆಶಿ ಅವರಿಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿ ಜಯಘೋಷ ಕೂಗಿದರು.
0 comments:
Post a Comment