7 ದಿನದ ಕಂದಮ್ಮನಿಗೂ ಪಾಸಿಟಿವ್
ಮಂಗಳೂರು (ಕರಾವಳಿ ಟೈಮ್ಸ್) : ಜಿಲ್ಲೆಯ, ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ 49 ವರ್ಷದ ವ್ಯಕ್ತಿ ಗುರುವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವು 18ಕ್ಕೇರಿದೆ. ಮತ್ತೊಂದು ಆಘಾತಕಾರಿ ಬೆಳವಣಿಗೆಯಲ್ಲಿ 7 ದಿನಗಳ ನವಜಾತ ಶಿಶುವಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಕಲ್ಕಡ್ಕ ನಿವಾಸಿ 49 ವರ್ಷ ಪ್ರಾಯದ ವ್ಯಕ್ತಿ ಕಳೆದ 20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅಸ್ತಮಾ, ಕಿಡ್ನಿ ಹಾಗೂ ಲಿವರ್ ಸಮಸ್ಯೆಯ ಚಿಕಿತ್ಸೆಗಾಗಿ ಕಳೆದ ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಅವರ ಗಂಟಲಿನ ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ.
ಈ ಮಧ್ಯೆ ಮಂಗಳೂರಿನಲ್ಲಿ ಜನಿಸಿದ 7 ದಿನದ ಮಗುವಿಗೆ ಕೊರೊನಾ ಪಾಸಿಟಿವ್ ಆಗಿದ್ದು ಜಿಲ್ಲೆಯ ಜನರನ್ನು ಆತಂಕಗೊಳ್ಳುವಂತೆ ಮಾಡಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ 21 ವರ್ಷದ ಮಹಿಳೆಗೆ ಕಳೆದ ಜೂನ್ 28 ರಂದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಇದರಿಂದ ಅಂದೇ ಮಗುವಿನ ಗಂಟಲ ದಿನ ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದೀಗ 7 ದಿನದ ನವಜಾತ ಶಿಶುವಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ಮಗು ಹಾಗೂ ತಾಯಿ ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
0 comments:
Post a Comment