ಕೊರೋನಾ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆ ನಡೆಸುವ ನಿರ್ಧಾರ ಮರುಪರಿಶೀಲಿಸಿ : ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬುಧವಾರ ಮಧ್ಯಾಹ್ನ 2.30ರೊಳಗೆ ಉತ್ತರಿಸುವಂತೆ ಸರಕಾರಕ್ಕೆ ಹೈ ಸೂಚನೆ
ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇದೇ ತಿಂಗಳ 30 ಹಾಗೂ ಆಗಸ್ಟ್ 1 ರಂದು ನಿಗದಿಯಾಗಿರುವ ಸಿಇಟಿ ಪರೀಕ್ಷೆ ನಡೆಸುವ ಸಂಬಂಧ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮಂಗಳವಾರ ಸೂಚಿಸಿದೆ.
ಜುಲೈ 30, ಆಗಸ್ಟ್ 1 ರಂದು ಸಿಇಟಿ ಪರೀಕ್ಷೆ ನಿಗದಿಯಾಗಿದ್ದು ಕೊರೋನಾವಿರುವ ಕಂಟೈನ್ಮೆಂಟ್ ಝೋನ್‍ಗಳಲ್ಲಿರುವವರು ಹೊರ ಹೋಗುವಂತಿಲ್ಲ. ಅಲ್ಲದೆ ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳು ಬಂದು ಸಿಇಟಿ ಪರೀಕ್ಷೆ ಬರೆಯುತ್ತಾರೆ. ಕೊರೊನಾ ಎಸ್‍ಓಪಿಯ ಅನುಸಾರ ಕಂಟೈನ್ಮೆಂಟ್ ಝೋನ್‍ನಲ್ಲಿರುವವರು ಹೊರಗೆ ಹೋಗುವಂತಿಲ್ಲ. ಬೆಂಗಳೂರಿನಲ್ಲೇ ಮೂರು ಸಾವಿರದಷ್ಟು ಕಂಟೈನ್ಮೆಂಟ್ ಝೋನ್‍ಗಳಿದೆ. ಹಾಗಾಗಿ ಅಲ್ಲಿನ ವಿದ್ಯಾರ್ಥಿಗಳು ಎಲ್ಲಿ ಹೋಗುತ್ತಾರೆ? ಅವರು ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದಿರುವ ಹೈಕೋರ್ಟ್ ಪರೀಕ್ಷೆ ನಡೆಸುವ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ರಾಜ್ಯ ಸರಕಾರಕ್ಕೆ ಸೂಚಿಸಿದೆ.
ವಕೀಲರಾದ ಎಸ್.ಪಿ. ಪ್ರದೀಪ್ ಕುಮಾರ್ ಹಾಗೂ ಎಸ್. ಹನುಮಂತೇಗೌಡ ಎಂಬವರು ಈ ಸಂಬಂಧ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಪೀಠ ನಿರ್ಧಾರದ ಮರುಪರಿಶೀಲನೆಗೆ ಸೂಚಿಸಿದ್ದು ಬುಧವಾರ ಮಧ್ಯಾಹ್ನ 2:30ರೊಳಗೆ ಉತ್ತರಿಸುವಂತೆ ಹೇಳಿ ವಿಚಾರಣೆ ಮುಂದೂಡಿದೆ.
0 comments:
Post a Comment