ಡೀಜೆ ಹಾಕಿ ನೃತ್ಯ ಮಾಡಿದ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಜುಲೈ 1 ರಂದು ನೆರವೇರಿದ ಮದುವೆ ಸಮಾರಂಭದ ವೇಳೆ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಯುವಕರು ಧ್ವನಿ ವರ್ಧಕಗಳನ್ನು ಬಳಸಿ ಗುಂಪು ಸೇರಿ ನೃತ್ಯ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ಈ ಬಗ್ಗೆ ತನಿಖೆ ಕೈಗೊಂಡ ಬಂಟ್ವಾಳ ಗ್ರಾಮಾಂತರ ಪೊಲೀಸರು ಮದುವೆ ಸಮಾರಂಭದಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘನೆಯಾಗಿರುವುದನ್ನು ಕಂಡುಕೊಂಡಿದ್ದಾರೆ.
ಜುಲೈ 1 ರಂದು ನಡೆದ ಸ್ಥಳೀಯ ನಿವಾಸಿ ಶಿವಪ್ಪ ಪೂಜಾರಿ ಎಂಬವರ ಮನೆಯಲ್ಲಿ ಅವರ ಪುತ್ರ ತಿಲಕ್‍ರಾಜ್ ಎಂಬಾತನ ಮದುವೆ ಕಾರ್ಯಕ್ರಮ ಇದಾಗಿದ್ದು, ಇಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘನೆಯಾಗಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಆರೋಪಿಗಳಾದ ಶಿವಪ್ಪ ಪೂಜಾರಿ, ಅವರ ಪುತ್ರ ತಿಲಕ್‍ರಾಜ್ ಹಾಗೂ ಇತರರ ವಿರುದ್ದ ಕಲಂ 269, 270 ಐಪಿಸಿ ಮತ್ತು ಕಲಂ 5(1) ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ ಕಾಯ್ದೆ 2020 ರಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಸ್ತುತ ತಿಲಕ್‍ರಾಜ್ ಅವರು ಮದುವೆಗೆ ಪ್ರಸ್ತುತ ಜಾರಿಯಲ್ಲಿರುವ ಲಾಕ್‍ಡೌನ್ ನಿಯಮದಂತೆ 50 ಜನರು ಸೇರಿ ಮದುವೆ ಸಮಾರಂಭವನ್ನು ನಡೆಸಲು ಸ್ಥಳೀಯ ಪಂಚಾಯತ್ ನಿಂದ ಅನುಮತಿ ಪಡೆದಿದ್ದರು. ಆದರೆ ಮದುವೆ ಮುನ್ನಾ ದಿನದ ಮೆಹಂದಿ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಅಧಿಕ ಜನ ಯುವಕರು ಸೇರಿಕೊಂಡು ಡಿಜೆ ಹಾಕಿ ನೃತ್ಯ ಮಾಡಿದ್ದರು. ಈ ಸಂಬಂಧ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸೂಚನೆಯಂತೆ ಕಾರ್ಯಪ್ರವೃತ್ತರಾದ ಬಂಟ್ವಾಳ ಗ್ರಾಮಾಂತರ ಪೊಲೀಸರು ಯುವಕರ ನೃತ್ಯದ ವಿಡಿಯೋ ಲಾಕ್‍ಡೌನ್ ಸಮಯದಲ್ಲಿ ನಡೆದಿರುವುದೇ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದರು.
ಇದೀಗ ಪೊಲೀಸರ ತನಿಖೆಯಿಂದ ಸದ್ರಿ ವೀಡಿಯೋ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ನಡೆದಿರುವುದು ಸಾಬೀತಾದ ಹಿನ್ನಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
0 comments:
Post a Comment