ಮಂಗಳೂರು (ಕರಾವಳಿ ಟೈಮ್ಸ್) : ನಗರದ ಹೊರವಲಯದ ಅಡ್ಯಾರ್ ಪದವು ಎಂಬಲ್ಲಿ ಶುಕ್ರವಾರ ರಾತ್ರಿ ವ್ಯಕ್ತಿಗಳ ನಡುವೆ ನಡೆದ ಮಾತಿನ ಚಕಮಕಿ ತಾರಕಕ್ಕೇರಿದ ಪರಿಣಾಮ ಇಲ್ಲಿನ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಯಾಕೂಬ್ (45) ಎಂಬವರು ಕೊಲೆಗೀಡಾಗಿದ್ದಾರೆ.
ಸ್ಥಳೀಯ ನಿವಾಸಿ ಶಾಕೀರ್ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.
ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಗಲಾಟೆ ತಾರಕಕ್ಕೇರಿ ಶಾಕೀರ್, ಯಾಕೂಬ್ ಮೇಲೆ ಕೈಯಿಂದ ಹಲ್ಲೆ ಮಾಡಿದ್ದಾನೆ. ಬಳಿಕ ನೆಲಕ್ಕೆ ದೂಡಿ ಹಾಕಿ ಎದೆಗೆ ಕಾಲಿನಿಂದ ಒದೆಯಲಾಗಿದೆ ಎನ್ನಲಾಗಿದೆ. ಘಟನೆಯಿಂದ ತೀವ್ರ ಅಸ್ವಸ್ಥರಾದ ಯಾಕೂಬ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಪಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment