ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಜನ ತೀವ್ರ ಆತಂಕಗೊಳ್ಳುವಂತಾಗಿದೆ.
ಭಾನುವಾರ ಒಂದೇ ದಿನ ದಕ್ಷಿಣ ಕನ್ನಡ ಜಿಲ್ಲೆಯ 147 ಜನರಿಗೆ ಸೋಂಕು ಹಬ್ಬಿದ್ದು, ತೀವ್ರತೆಯನ್ನು ಸೂಚಿಸುತ್ತದೆ. ಉಳ್ಳಾಲ ಸಮುದಾಯಿಕ ಪರೀಕ್ಷೆಯಲ್ಲಿ 48 ಮಂದಿಗೆ ಪಾಸಿಟಿವ್ ಬಂದರೆ, ಪ್ರಾಥಮಿಕ ಸಂಪರ್ಕದಿಂದ 35 ಜನರಿಗೆ ಸೋಂಕು ಬಂದಿದೆ. ಅಂತರಾಷ್ಟ್ರೀಯ ಪ್ರಯಾಣದಿಂದ 8 ಮಂದಿಗೆ, ಹೊರ ಜಿಲ್ಲೆಯಿಂದ ಬಂದ 7 ಮಂದಿಗೆ, ಸಾರಿಗೆಯಿಂದ ಇಬ್ಬರಿಗೆ, ಕೋವಿಡ್ ಆಸ್ಪತ್ರೆಯ ಇಬ್ಬರಿಗೆ, ಮಲೇಷಿಯಾದಿಂದ ಹಡಗಿನಲ್ಲಿ ಬಂದ ಇಬ್ಬರಿಗೆ, ಶಸ್ತ್ರ ಚಿಕಿತ್ಸೆಯ ಮೊದಲು ಮಾಡಿದ ಟೆಸ್ಟ್ ನಿಂದ ಒಬ್ಬರಿಗೆ, ಹೆರಿಗೆಯ ಸಂದರ್ಭ ಮಾಡಿದ ಟೆಸ್ಟ್ ನಿಂದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ. ಸಂಪರ್ಕವೇ ಪತ್ತೆಯಾಗದ ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕೊರೊನಾ ಸೋಂಕು ಹೆಚ್ಚಳಕ್ಕೆ ಪ್ರಾಥಮಿಕ ಸಂಪರ್ಕವೇ ಅಧಿಕ ಪ್ರಮಾಣದಲ್ಲಿ ಕಾರಣವಾಗಿದೆ. ಅದನ್ನಹೊರತುಪಡಿಸಿದರೆ ಉಳ್ಳಾಲದ ಸಮುದಾಯಿಕ ಪರೀಕ್ಷೆಯಲ್ಲಿ ಅಧಿಕ ಜನರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಈ ನಡುವೆ ಮಂಗಳೂರಿನ ಆಸ್ಪತ್ರೆಯಿಂದ ಸೋಂಕಿತನೊಬ್ಬ ಎಸ್ಕೇಪ್ ಆಗಿದ್ದಾನೆ. ಸ್ವಇಚ್ಛೆಯಿಂದ ಜುಲೈ 1ರಂದು ಕೋವಿಡ್-19 ರೋಗ ಲಕ್ಷಣಗಳು ಇದೆ ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಈತನಿಗೆ ಕೋವಿಡ್-19 ದೃಢ ಪಟ್ಟಿದೆ. ನಂತರ ಸುಮಾರು 4 ಗಂಟೆಯ ಸಮಯ ವೆನ್ ಲಾಕ್ ಆಸ್ಪತ್ರೆಯ ಕೋವಿಡ್ ಬ್ಲಾಕ್ ನಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಈತನ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.
ಆರೋಪಿತ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ದರ್ಬೆ ನಿವಾಸಿಯಾಗಿದ್ದು, ಮಂಗಳೂರಿನ ಅಜ್ಜಿ ಮನೆಯಲ್ಲಿ ವಾಸ್ತವ್ಯವಿದ್ದ 18 ವರ್ಷದ ದೇವರಾಜು ಎನ್ನಲಾಗಿದ್ದು, ಈತನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದರೆ ಮತ್ತು ಎಲ್ಲಿಯಾದರೂ ಕಂಡು ಬಂದರೆ ನಗರ ಪೊಲೀಸ್ ಕಂಟ್ರೋಲ್ ನಂಬರ್ 9480802300 ಹಾಗೂ ಪಾಂಡೇಶ್ವರ ಪೊಲೀಸ್ ಠಾಣಾ 0824-2220530 ಈ ನಂಬರ್ ಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಇನ್ನಷ್ಟು ಕಠಿಣ ಕ್ರಮ ಜರುಗಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
0 comments:
Post a Comment