ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಮಾಜಿ ಅಧ್ಯಕ್ಷೆ ಯಶೋಧಾ ಬಿ (57) ಅವರು ಅನಾರೋಗ್ಯದಿಂದ ಮಂಗಳವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲ ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಯಶೋಧಾ ಅವರ ಆರೋಗ್ಯ ಸ್ಥಿತಿ ಸೋಮವಾರ ಗಂಭೀರಾವಸ್ಥೆಗೆ ತಲುಪಿದ್ದರಿಂದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಮಂಗಳವಾರ ರಾತ್ರಿ ವೇಳೆಗೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬೋರ್ ವೆಲ್ ಉದ್ಯಮಿ ಕಲ್ಲಡ್ಕ ಕೃಷ್ಣಪ್ಪ ಅವರ ಪತ್ನಿಯಾಗಿರುವ ಇವರು ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
2001 ರಲ್ಲಿ ಭಂಡಾರಿಬೆಟ್ಟು ಕ್ಷೇತ್ರದಿಂದ ಬಂಟ್ವಾಳ ಪುರಸಭೆಗೆ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ ಇವರು ಪ್ರಥಮ ಅವಧಿಯಲ್ಲೇ ಮೀಸಲಾತಿ ಕಾರಣದಿಂದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಬಳಿಕ 2008 ರಲ್ಲಿ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಬಂಟ್ವಾಳ ಪುರಸಭೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪದವಿ ಅಲಂಕರಿಸಿದ ಏಕೈಕ ಮಹಿಳಾ ರಾಜಕಾರಣಿಯಾಗಿ ಗಮನ ಸೆಳೆದಿದ್ದರು. ಬಳಿಕದ ದಿನಗಳಲ್ಲಿ ಚುನಾವಣಾ ರಾಜಕೀಯದಿಂದ ದೂರವುಳಿದಿದ್ದ ಇವರು ಬಿಜೆಪಿ ಪಕ್ಷದ ಕೆಲ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಆ ಬಳಿಕ ರಾಜಕೀಯದಿಂದ ಬಹು ದೂರ ಸರಿದಿದ್ದರು.
0 comments:
Post a Comment