ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆ ಸರಕಾರಿ ನಿಯಮಕ್ಕೆ ಅನುಗುಣವಾಗಿ ಸೂಕ್ತ ಕ್ರಮಕೈಗೊಳ್ಳಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಸಾರಿಗೆ ಸಹಿತ ಎಲ್ಲಾ ವ್ಯವಸ್ಥೆಗಳನ್ನು ಅಧಿಕಾರಿಗಳು ಕಲ್ಪಿಸಬೇಕು ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು ಟಿ ಖಾದರ್ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.
ಜೂನ್ 25 ರಿಂದ ಎಸೆಸೆಲ್ಸಿ ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ಶುಕ್ರವಾರ ಬಿ ಸಿ ರೋಡಿನ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ತನ್ನ ಕ್ಷೇತ್ರಕ್ಕೆ ಒಳಪಟ್ಟ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳ ಹಾಗೂ ಪರೀಕ್ಷಾ ಕೇಂದ್ರಗಳ ಪೂರ್ವ ತಯಾರಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ವಿವರ ಪಡೆದುಕೊಂಡ ಅವರು ಕೊರೋನ ಸಾಂಕ್ರಾಮಿಕ ರೋಗದ ನಡುವೆಯೂ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಹಾಗೂ ಶಿಕ್ಷಕರು, ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಕರ್ತವ್ಯಕ್ಕೆ ನೇಮಿಸಿದ ಸಿಬ್ಬಂದಿಯನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದ ಅವರಣದೊಳಗೆ ಯಾವುದೇ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶ ಕೊಡಬಾರದು ಎಂದವರು ಸೂಚಿಸಿದರು.
ಸರಕಾರ ನಿಗದಿಪಡಿಸಿದಂತೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಬೇಕಾದ ಸಕಲ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಅದನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಸೂಚಿಸಿದ ಶಾಸಕ ಖಾದರ್ ಕರ್ನಾಟಕ-ಕೇರಳ ಗಡಿ ಭಾಗವಾದ ಬಾಕ್ರಬೈಲು, ಎಡಮಾರಿ ಮೊದಲಾದ ಪ್ರದೇಶಗಳ ಹಲವು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಿಗೆ ಪರಿಕ್ಷಾ ಕೇಂದ್ರ ತಲುಪಲು ಸಾರಿಗೆ ಸಮಸ್ಯೆ ಇರುವುದರಿಂದ ಖಾಸಗಿ ಬಸ್‍ಗಳನ್ನು ಕಲ್ಪಿಸಬೇಕು. ಎಲ್ಲಾ ಪರೀಕ್ಷೆಗಳ ದಿನದಂದು ಗಡಿ ಭಾಗದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಪರೀಕ್ಷೆ ಮುಗಿದ ಬಳಿಕ ಅದೇ ಬಸ್‍ನಲ್ಲಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಖಾದರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆ ಬರೆಯಲು ಬೇಕಾದ ಸಂಪೂರ್ಣ ತಯಾರಿಯನ್ನು ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಮಾಡಿದೆ. ವಿದ್ಯಾರ್ಥಿಗಳು ಭಯಪಡದೆ ಪರೀಕ್ಷೆ ಬರೆಯಬೇಕು ಎಂದು ಇದೇ ವೇಳೆ ಖಾದರ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಇದೇ ವೇಳೆ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಸರಕಾರದ ಸುತ್ತೋಲೆಯಂತೆ ಪರೀಕ್ಷೆ ನಡೆಯುವ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಬಗ್ಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ. ಪರೀಕ್ಷೆಯ ಪೂರ್ವ ತಯಾರಿ ಬಗ್ಗೆ ತಹಶೀಲ್ದಾರ್ ಕಛೇರಿಯಲ್ಲಿ ಜೂನ್ 15 ರಂದು ಸಭೆ ನಡೆಯಲಿದೆ ಎಂದರು.
ಸಭೆಯಲ್ಲಿ ಜಿ ಪಂ ಸದಸ್ಯರಾದ ರವೀಂದ್ರ ಕಂಬಳಿ, ಮಮತಾ ಡಿ ಎಸ್ ಗಟ್ಟಿ, ಮಮತ ಗಟ್ಟಿ, ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುದು ಗ್ರಾ ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸದಸ್ಯ ಇಕ್ಬಾಲ್ ಸುಜೀರ್, ಯುವ ಕಾಂಗ್ರೆಸ್ ಮುಖಂಡ ಮಜೀದ್ ಪೇರಿಮಾರ್, ಪ್ರಮುಖರಾದ ಉಮ್ಮರ್ ಫಜೀರು, ಹೈದರ್ ಕೈರಂಗಳ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment