ದಾವಣಗೆರೆ (ಕರಾವಳಿ ಟೈಮ್ಸ್) : ತಾನು ಕೇಳಿದ ಆರ್‌ಎಕ್ಸ್ ಬೈಕ್ ಪೋಷಕರು ಖರೀದಿಸಿ ಕೊಟ್ಟಿಲ್ಲ ಎಂದು ಡಿಪ್ಲೋಮಾ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕೆಟಿಜೆ ನಗರ ವ್ಯಾಪ್ತಿಯ ಅಂಬಿಕಾ ನಗರದಲ್ಲಿ ನಡೆದಿದೆ.
ಅಂಬಿಕಾ ನಗರದ ಬಿ ಬ್ಲಾಕ್ ನಿವಾಸಿ ಮಂಜುನಾಥ್ (20) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಂಜುನಾಥ್ ಸಿವಿಲ್ ಇಂಜಿನಿಯರ್ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದ. ಮೃತ ವಿದ್ಯಾರ್ಥಿ ಗ್ರಾಮಾಂತರ ಪೊಲೀಸ್ ಠಾಣೆಯ ಹಿರಿಯ ಕಾನ್ಸ್ ಟೇಬಲ್ ದೇವೇಂದ್ರಪ್ಪ ಅವರ ಪುತ್ರ ಎನ್ನಲಾಗಿದೆ.
ಮಂಜುನಾಥ್‍ಗೆ ಆಗಲೇ ರಾಯಲ್ ಎನ್‍ಫೀಲ್ಡ್ ಬೈಕ್ ಕೊಡಿಸಲಾಗಿತ್ತಾದರೂ ಸಹ ತನಗೆ ಆರ್‌ಎಕ್ಸ್-100 ಬೈಕ್ ಕೊಡಿಸುವಂತೆ ಕೇಳಿದ್ದ. ಮಗನ ಹಠದಿಂದಾಗಿ ತಂದೆಯೂ ಸಹ ಒಂದು ವಾರದಲ್ಲಿ ಬೈಕ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೂ ಮಂಜುನಾಥ್ ಬೇಸರಗೊಂಡು ಸೋಮವಾರ ರಾತ್ರಿ ಊಟ ಸಹ ಮಾಡದೇ ಮೊದಲ ಮಹಡಿಗೆ ಹೋಗಿದ್ದ.
ಮಗ ಮಲಗಲು ಮೊದಲ ಮಹಡಿಗೆ ಹೋಗಿದ್ದಾನೆ ಎಂದು ಪೋಷಕರು ತಿಳಿದಿದ್ದರು. ಆದರೆ ಮಂಜುನಾಥ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಬಾಗಿಲು ತೆಗೆದಾಗ ಮಂಜುನಾಥ್ ಮೃತಪಟ್ಟಿರುವುದು ಪೋಷಕರಿಗೆ ತಿಳಿದಿದೆ. ಕ್ಷುಲ್ಲಕ ಕಾರಣಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
0 comments:
Post a Comment