ಚಾರ್ಮಾಡಿ ಘಾಟ್ ಅಪಾಯದ ಮಧ್ಯೆ ಬಂಡೆಗಳ ಮೇಲೆ ಯುವಕರಿಂದ ಫೋಟೋ ಸೆಶನ್
ಯುವಕರು-ವಿದ್ಯಾರ್ಥಿಗಳ ಅಪಾಯಕಾರಿ ಬೈಕ್ ಜಾಲಿ ರೈಡ್‍ಗೆ ಪೊಲೀಸರ ಕಡಿವಾಣ ಅಗತ್ಯ: ಸಾರ್ವಜನಿಕರ ಆಗ್ರಹ
ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ರಣಕೇಕೆ ರಾಜ್ಯದಲ್ಲಿ ಇನ್ನೂ ನಿಂತಿಲ್ಲ. ಈ ಮಧ್ಯೆ ಸರಕಾರ ಆರ್ಥಿಕ ಪುನಶ್ಚೇತನ ದೃಷ್ಟಿಯಿಂದ ಲಾಕ್‍ಡೌನ್ ಸಡಿಲಿಸಿ ಅಗತ್ಯ ಸೇವೆಗಳಿಗೆ ಅವಕಾಶ ನೀಡಿದೆ. ಆದರೆ ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಯುವಕರ ತಂಡ ಪ್ರವಾಸ, ಬೈಕ್ ರ್ಯಾಲಿ, ಮೋಜು-ಮಸ್ತಿ ನಡೆಸುತ್ತಿರುವುದು ಜಿಲ್ಲೆಯಲ್ಲಿ ಹಾಗೂ ಜಿಲ್ಲೆಯ ಹೊರಗೆ ಕಂಡು ಬರುತ್ತಿದೆಯಲ್ಲದೆ ಇದಕ್ಕೂ ಮಿಗಿಲಾಗಿ ಅಪಾಯಕಾರಿ ಸ್ಥಳಗಳಲ್ಲಿ ಯುವಕರು ನಡೆಸುತ್ತಿರುವ ಸೆಲ್ಫಿ ಗೀಳು ಸಾರ್ವಜನಿಕರು ಆತಂಕ ವ್ಯಕ್ತಪಡಿಸುವಂತೆ ಮಾಡುತ್ತಿದೆ.
ಅದರಲ್ಲೂ ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ಪ್ರವಾಸಿಗರ ಸೆಲ್ಫಿ ಕ್ರೇಜ್ ತೀವ್ರ ಆತಂಕವನ್ನುಂಟುಮಾಡುತ್ತಿದೆ. ಈಗಾಗಲೇ ಕಳೆದೆರಡು ವರ್ಷಗಳಲ್ಲಿ ಚಾರ್ಮಾಡಿ ಘಾಟಿಯಲ್ಲಿ ಯುವಕರ ಸೆಲ್ಫಿ ಕ್ರೇಜಿಗೆ ಸಾವು-ನೋವು ಸಂಭವಿಸಿರುವ ಹಲವು ಉದಾಹರಣೆಗಳಿವೆ. ಕಳೆದ ವರ್ಷ ಕೂಡ ಪ್ರವಾಸಿಗನೋರ್ವ ಬಂಡೆ ಕಲ್ಲಿನಿಂದ ಜಾರಿ ಬಿದ್ದ ಘಟನೆ ನಡೆದಿತ್ತು. ಈ ಬಾರಿ ಕೊರೋನಾ ಆತಂಕದ ನಡುವೆಯೂ ಈ ಮಾರ್ಗವಾಗಿ ಸಂಚರಿಸುವ ಪ್ರವಾಸಿಗರು ಮತ್ತದೇ ಸೆಲ್ಫ ಕ್ರೇಜಿಗೆ ಜೋತು ಬೀಳುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.
ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಚಾರ್ಮಾಡಿ ಘಾಟಿಯ ಮಧ್ಯೆ ಅಲ್ಲಲ್ಲಿ ಸಣ್ಣ-ಪುಟ್ಟ ಜಲಪಾತಗಳ ಮಾದರಿಯ ಸನ್ನಿವೇಶಗಳು ಸೃಷ್ಟಿಯಾಗಿವೆ. ಪ್ರವಾಸಿಗರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಬಂಡೆಗಳ ಮೇಲೆ ಹತ್ತಿ ಸೆಲ್ಫಿ, ಫೆÇೀಟೋ ಸೆಷೆನ್ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚಾರ್ಮಾಡಿ ಘಾಟಿಯ ಮಾರ್ಗದಲ್ಲಿ ಸೆಲ್ಫಿಗೆ ನಿಷೇಧ ಹೇರಿದ್ದರೂ ಪ್ರವಾಸಿಗರು ಅಪಾಯದ ಸ್ಥಳಗಲ್ಲಿ ಮತ್ತೆ ಬಂಡೆಗಳ ಮೇಲೆ ಹತ್ತಿ ಸೆಲ್ಫಿಗೆ ಮುಗಿ ಬೀಳುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಭಾರೀ ಅಪಾಯವಂತೂ ನಿಶ್ಚಿತ ಎಂಬ ಆತಂಕ ಸಾರ್ವಜನಿಕರದ್ದು.
ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿರುವುದರಿಂದ ಲಾಕ್‍ಡೌನ್ ಸಡಿಲಿಕೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಯುವಕರು ಅದರಲ್ಲೂ ವಿದ್ಯಾರ್ಥಿಗಳು ಹಲವಾರು ಬೈಕ್‍ಗಳ ಮೇಲೆ ಗುಂಪು ಗುಂಪಾಗಿ ಹೆದ್ದಾರಿಗಳಲ್ಲಿ, ಘಾಟಿಗಳಲ್ಲಿ ಜಾಲಿ ರೈಡ್ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಪೊಲೀಸರು ಅಪಾಯಕಾರಿ ಬೈಕ್ ರೈಡ್‍ಗಳ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
0 comments:
Post a Comment