ಹೈದರಾಬಾದ್ (ಕರಾವಳಿ ಟೈಮ್ಸ್) : ಖ್ಯಾತ ಹಿನ್ನಲೆ ಗಾಯಕಿ ಎಸ್. ಜಾನಕಿ ನಿಧನರಾಗಿದ್ದಾರೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದೆರಡು ದಿನಗಳಿಂದ ಹರಿದಾಡಿದ್ದು, ಈ ಬಗ್ಗೆ ಅವರ ಕುಟುಂಬಿಕರು ಹಾಗೂ ಸ್ವತಃ ಜಾನಕಿ ಅವರೇ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ತೀವ್ರ ಆತಂಕಕ್ಕೊಳಗಾಗಿದ್ದ ಹಿರಿಯ ಗಾಯಕಿಯ ಅಭಿಮಾನಿಗಳು ಹಾಗೂ ಆಪ್ತರು ನಿಟ್ಟುಸಿರು ಬಿಟ್ಟಿದ್ದಾರೆ.
ಗಾಯಕಿ ಎಸ್. ಜಾನಕಿ ಆರೋಗ್ಯವಾಗಿದ್ದಾರೆ. ದಯಮಾಡಿ ಇಂತಹ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಆಕೆಯ ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದಾರೆ. ಖ್ಯಾತ ಗಾಯಕ ಎಸ್.ಪಿ. ಬಾಲ ಸುಬ್ರಮಣ್ಯಂ ಅವರೂ ಕೂಡಾ ಜಾನಕಿ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಳು ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಗಾಯಕಿ ಎಸ್. ಜಾನಕಿ ಅವರು, ತಾನು ಆರೋಗ್ಯವಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಯಾರಿಗೂ ಚಿಂತೆ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ಏಕೆ ಹಬ್ಬಿಸಲಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಸುಳದ್ಳು ವದಂತಿ ಬಳಿಕ ನನ್ನ ಆರೋಗ್ಯದ ಬಗ್ಗೆ ತಿಳಿದು ಕೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ಜನ ದೂರವಾಣಿ ಕರೆ ಮಾಡುತ್ತಿದ್ದಾರೆ ಎಂದ ಅವರು ಇಂತಹ ಸುಳ್ಳು ಸುದ್ದಿ ಹಬ್ಬಿಸುವುದರಿಂದ ಏನು ಪ್ರಯೋಜನ ಎಂದವರು ಪ್ರಶ್ನಿಸಿದ್ದಾರೆ. ನಾನು ಚೆನ್ನಾಗಿಯೇ ಇದ್ದೇನೆ. ನೀವೆಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಜಾಗರೂಕರಾಗಿರಿ ಎಂದು ಗಾಯಕಿ ಜಾನಕಿ ಸಲಹೆ ನೀಡಿದ್ದಾರೆ.
0 comments:
Post a Comment