ಕಲ್ಲು ಗಣಿಗಾರಿಕೆಯಿಂದ ನಾಶವಾಗುತ್ತಿರುವ ನೆಲೆಯನ್ನು ಪುರಾತತ್ವ ಇಲಾಖೆ ಸಂರಕ್ಷಿಸಬೇಕಾಗಿದೆ
ದಾವಣಗೆರೆ (ಕರಾವಳಿ ಟೈಮ್ಸ್) : ಜಿಲ್ಲೆಯ ಜಗಳೂರು ತಾಲೂಕಿನ ಆಕನೂರು ಗ್ರಾಮಕ್ಕೆ ಸೇರುವ ಹೊನ್ನಮರಡಿ ಪ್ರದೇಶದಲ್ಲಿ ಕಂಡುಬರುವ ಹೊಲದ ಮಧ್ಯಭಾಗದ ದಿಬ್ಬದಲ್ಲಿನ ಬಂಡೆಗಳ ಮೇಲೆ ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದ ಗೀರು ಚಿತ್ರಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಸೀಮಾ ರೆಹಮಾನ್ ಅವರು ಪತ್ತೆ ಮಾಡಿದ್ದಾರೆ.
ಈ ನೆಲೆಯಲ್ಲಿ ಡುಬ್ಬದ ಗೂಳಿ, ಜಿಂಕೆ, ಕಲ್ಗುಳಿಗಳು, ಚೆನ್ನಮಣೆ ಮಾದರಿಯ ಕುಳಿಗಳು, ಜ್ಯಾಮಿತೀಯ ಗೀರು ಚಿತ್ರಗಳು ಪತ್ತೆಯಾಗಿವೆ. ಪ್ರಮುಖವಾಗಿ ಮಾನವನ ರೇಖಾ ಚಿತ್ರ, ಹಾವಿನ ರೇಖಾ ಚಿತ್ರ, ಅಂತ್ರೊಮಾರ್ಪಿಕ್, ಪಾದದ ರೇಖಾ ಚಿತ್ರ, ಸಮಾಧಿ ಸಂಸ್ಕ್ರತಿಯನ್ನು ತೋರಿಸುವ ಗೀರು ಚಿತ್ರಗಳು, ಮಂಡಲದ ರೀತಿಯಲ್ಲಿರುವ ಗೀರು ಚಿತ್ರಗಳು ಪತ್ತೆಯಾಗಿದೆ.
ಈ ನೆಲೆಯ ಪ್ರತಿಯೊಂದು ಬಂಡೆಯ ಸಾಲಿನಲ್ಲಿ ಗೀರು ಚಿತ್ರಗಳಿದ್ದು, ಕೆಲವು ಗೀರು ಚಿತ್ರದ ಮೇಲೆ ಇನ್ನೊಂದು ಗೀರು ಚಿತ್ರಗಳನ್ನು ಕೊರೆದಿರುವುದನ್ನು ಕಾಣಬಹುದು. ನೆಲೆಯಲ್ಲಿ ಮುಖ್ಯವಾಗಿ ಸೂಕ್ಷ್ಮ ಶಿಲಾಯುಗಕ್ಕೆ ಸಂಬಂಧಿಸಿದ ಉಪಕರಣಗಳು, ನೂತನ ಶಿಲಾಯುಗದ ಕಲ್ಲಿನ ಕೊಡಲಿ, ಕಪ್ಪು-ಕೆಂಪು ಬಣ್ಣದ ಮಡಕೆ, ಹೊಳಪುಳ್ಳ ಕಪ್ಪು ಬಣ್ಣದ ಮಡಕೆ, ಬೂದು ಬಣ್ಣದ ಮಡಕೆ ಚೂರುಗಳು ಹಾಗೂ ಪಕ್ಕದ ಹೊಲದಲ್ಲಿ ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ವೃತ್ತ ಸಮಾಧಿಯು ಪತ್ತೆಯಾಗಿದೆ.
ನೆಲೆಗೆ ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮತ್ತು ಸುಪ್ರೀತ ಕೆ.ಎನ್. ಕಳಸ ಅವರು ಭೇಟಿ ನೀಡಿದ್ದು ಕ್ಷೇತ್ರ ಕಾರ್ಯ ಶೋಧದಲ್ಲಿ ಸಹಕಾರ ನೀಡಿದ್ದಾರೆ. ಈ ನೆಲೆಯಲ್ಲಿ ಸೂಕ್ಷ್ಮ ಶಿಲಾಯುಗ, ನೂತನ ಶಿಲಾಯುಗ, ಬೃಹತ್ ಶಿಲಾಯುಗದಿಂದ ಹಿಡಿದು ಇತಿಹಾಸ ಕಾಲಘಟ್ಟದವರೆಗಿನ ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ನೆಲೆಯ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ಮುಂದುವರಿಸಲಾಗಿದೆ.
ಕ್ಷೇತ್ರ ಕಾರ್ಯದಲ್ಲಿ ಶಗೀರ್ ಅಹ್ಮದ್ ಮತ್ತು ರಾಘವೇಂದ್ರ ಮೂಡುಬೆಳ್ಳೆ ಅವರು ಸಹಕಾರ ನೀಡಿದ್ದು, ಪ್ರಸ್ತುತ ಈ ನೆಲೆಯು ಕಲ್ಲಿನ ಗಣಿಗಾರಿಕೆಯಿಂದ ನಾಶವಾಗುತ್ತಿದ್ದು, ಪುರಾತತ್ವ ಇಲಾಖೆ ಮತ್ತು ಜಿಲ್ಲೆಯ ಪ್ರಮುಖ ಇಲಾಖೆಯು ನೆಲೆಯನ್ನು ಸಂರಕ್ಷಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಈ ಪ್ರಾಗೈತಿಹಾಸಿಕ ನೆಲೆಯು ಜಗಳೂರಿನಲ್ಲಿ ಇಲ್ಲದಂತಾಗಬಹುದು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
0 comments:
Post a Comment