ಬಂಟ್ವಾಳ (ಕರಾವಳಿ ಟೈಮ್ಸ್) : ನೇತ್ರಾವತಿ ವೀರರಿಗೆ ಜೀವರಕ್ಷಕ ಸಾಮಗ್ರಿಗಳು ನೀಡುವಂತೆ ಎಸ್ಡಿಪಿಐ ಪಕ್ಷದ ನಾಯಕರು ನೀಡಿದ ಮನವಿಗೆ ಸ್ಪಂದಿಸಿದ ಬಂಟ್ವಾಳ ತಹಶೀಲ್ದಾರರು ಇಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಯು ರಾಜೇಶ್ ನಾಯಕ್ ಅವರ ಸಮ್ಮುಖದಲ್ಲಿ ಜೀವರಕ್ಷಕ ಸಾಮಾಗ್ರಿಗಳನ್ನು ವಿತರಿಸಿದ್ದು, ತಹಶೀಲ್ದಾರ್ ಅವರ ಸ್ಪಂದನೆಗೆ ಅಭಿನಂದನೆಗಳು ಎಂದು ಪುರಸಭಾ ಮಾಜಿ ಸದಸ್ಯ ಮುಹಮ್ಮದ್ ಇಕ್ಬಾಲ್ ಐಎಂಆರ್ ತಿಳಿಸಿದ್ದಾರೆ.
ಗೂಡಿನ ಬಳಿಯ ನೇತ್ರಾವತಿ ವೀರರು ಇದುವರೆಗೆ ಯಾವುದೇ ರಕ್ಷಣಾ ಕವಚಗಳಿಲ್ಲದೆ ಪ್ರಾಣದ ಹಂಗು ತೊರೆದು ನೀರಿಗೆ ಬಿದ್ದವರನ್ನು ಪ್ರಾಣಾಪಾಯದಿಂದ ಪಾರು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದು, ಎಸ್ಡಿಪಿಐಯ ಮನವಿಯ ನಂತರ ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಆಡಳಿತವು ರಕ್ಷಣಾ ಕವಚಗಳನ್ನು ಒದಗಿಸಿರುವುದಕ್ಕೆ ಅಭಿನಂದನೆಗಳು ಎಂದ ಇಕ್ಬಾಲ್ ಇನ್ನೂ ಹಲವು ರಕ್ಷಣಾ ಸಾಮಗ್ರಿಗಳ ಅವಶ್ಯಕತೆ ಇದ್ದು ಅದನ್ನು ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳು ನೀಡಿ ಸಹಕರಿಸಬೇಕಾಗಿ ಕೋರಿದ್ದಾರೆ. ಈ ಎಲ್ಲಾ ಸಾಮಗ್ರಿಗಳನ್ನು ದಾಸ್ತಾನು ಇಡಲು ಸೂಕ್ತವಾದ ಕಟ್ಟಡ ನಿರ್ಮಾಣವನ್ನು ಪುರಸಭೆಯ ವತಿಯಿಂದ ಒದಗಿಸಿ ಕೊಡುವ ಮೂಲಕ ನೇತ್ರಾವತಿ ವೀರರಿಗೆ ಸಹಕರಿಸಬೇಕೆಂದು ಕೂಡಾ ಅವರು ಹೇಳಿಕೆಯಲ್ಲಿ ಕೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಹಮ್ಮದ್, ಶಫೀವುಲ್ಲಾ, ಜಿ. ಮಹಮ್ಮದ್, ಫಿರೋಝ್ ಗೂಡಿನಬಳಿ, ಅನ್ಸಾರ್, ಬಶೀರ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment