ಚಿತ್ರದುರ್ಗ (ಕರಾವಳಿ ಟೈಮ್ಸ್) : ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನೀಡುವುದು ಅಪಾಯಕಾರಿಯಾಗಿದೆ. ಅಲ್ಲದೆ ಕೊರೊನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆ ತೆರೆಯಬಾರದು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ನಗರದ ಮುರುಘಾ ಮಠದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಭೇಟಿ ಬಳಿಕ ಮಾತನಾಡಿದ ಅವರು, 1ನೇ ತರಗತಿಯಿಂದ ಪಿಯುಸಿವರೆಗೆ ಆನ್‍ಲೈನ್ ಶಿಕ್ಷಣ ಸಾಧ್ಯವಿಲ್ಲ. ಹೀಗಾಗಿ ಅನಗತ್ಯ ರಜೆಗಳನ್ನು ರದ್ದುಪಡಿಸಿ, ಶನಿವಾರ ಪೂರ್ತಿ ದಿನ ತರಗತಿ ನಡೆಸಬೇಕು. ಅಗತ್ಯವಿದ್ದರೆ ಯಾವುದಾದರೂ ಒಂದು ಶನಿವಾರ ಮಾತ್ರ ರಜೆ ನೀಡಬೇಕು ಎಂದರು.
ಪಠ್ಯ ಮುಕ್ತಾಯಗೊಳಿಸಲು ತಲೆಕೆಡಿಸಿಕೊಳ್ಳುವ ಬದಲಾಗಿ ಶಾಲಾ ಸಮಯವನ್ನು ಅರ್ಧಗಂಟೆ ಹೆಚ್ಚಿಸಬೇಕು. ಪ್ರತಿ ವರ್ಷ ನೀಡುವ ದಸರಾ ರಜೆ ರದ್ದು ಮಾಡುವುದರ ಜೊತೆಗೆ ವಿವಿಧ ಜಯಂತಿ ಆಚರಣೆಗಳ ರಜೆಗಳನ್ನು ಸಹ ರದ್ದು ಮಾಡಬೇಕು ಎಂದವರು ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರಕಾರ ಸಿದ್ಧವಾಗಿದ್ದು, ಪರೀಕ್ಷಾ ಕೇಂದ್ರಗಳು 2 ಇದ್ದಲ್ಲಿ 4 ಮಾಡಿ ಪರೀಕ್ಷೆ ನಡೆಸಬೇಕಾಗಿದೆ. ಈ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉತ್ಸಾಹದಿಂದ ಓಡಾಡುತ್ತಾರೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಬೇಜವವ್ದಾರಿತನವಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಬಹುತೇಕರಿಗೆ ಕಳಕಳಿ ಇಲ್ಲವಾಗಿದೆ. ರಾಜ್ಯ ಸರಕಾರ ನಮ್ಮ ಸಲಹೆ ಸೂಚನೆಯನ್ನು ಈವರೆಗೆ ಕೇಳಿಲ್ಲ. ಇಂತಹ ಸಮಯದಲ್ಲಿ ಅಧಿಕಾರಿಗಳು ಮತ್ತು ತಜ್ಞರ ಸಭೆ ಕರೆಯಬೇಕು. ಆಗ ಮಾತ್ರ ಇಂತಹ ಪರಿಸ್ಥಿತಿ ಎದುರಿಸಲು ಸಾಧ್ಯವಾಗುತ್ತದೆ ಎಂದರು.
0 comments:
Post a Comment