ಫರಂಗಿಪೇಟೆ ಸೇವಾಂಜಲಿಯಿಂದ ಗೂಡಿನಬಳಿ ಈಜುಪಟುಗಳಿಗೆ ನಾಡದೋಣಿ ಹಾಗೂ ಜಾಕೆಟ್ ಕೊಡುಗೆ - Karavali Times ಫರಂಗಿಪೇಟೆ ಸೇವಾಂಜಲಿಯಿಂದ ಗೂಡಿನಬಳಿ ಈಜುಪಟುಗಳಿಗೆ ನಾಡದೋಣಿ ಹಾಗೂ ಜಾಕೆಟ್ ಕೊಡುಗೆ - Karavali Times

728x90

11 June 2020

ಫರಂಗಿಪೇಟೆ ಸೇವಾಂಜಲಿಯಿಂದ ಗೂಡಿನಬಳಿ ಈಜುಪಟುಗಳಿಗೆ ನಾಡದೋಣಿ ಹಾಗೂ ಜಾಕೆಟ್ ಕೊಡುಗೆ



ಬಂಟ್ವಾಳ (ಕರಾವಳಿ ಟೈಮ್ಸ್) : ನೇತ್ರಾವತಿ ನದಿಯಲ್ಲಿ ಬಿದ್ದು ಪ್ರಾಣಾಪಾಯದಲ್ಲಿರುವರನ್ನು ರಕ್ಷಿಸಲು ನಾಡದೋಣಿ ಬೇಕು ಎನ್ನುವ ಪಾಣೆಮಂಗಳೂರು ಪರಿಸರದ  ಈಜುಗಾರರ ಹಲವು ವರ್ಷದ ಬೇಡಿಕೆಗೆ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಸ್ಪಂದಿಸಿ ಏರ್ಯ ಬಾಲಕೃಷ್ಣ ಹೆಗ್ಡೆ ಮತ್ತಿತರರ  ಸಹಕಾರದೊಂದಿಗೆ ಅಂದಾಜು 70 ಸಾವಿರ ರೂಪಾಯಿ ಮೌಲ್ಯದ ಹೊಸ ನಾಡ ದೋಣಿ ಹಾಗೂ ಈಜುಪಟುಗಳಿಗೆ ಜಾಕೆಟ್‍ಗಳನ್ನು ಗುರುವಾರ ವಿತರಿಸಿದೆ.

ಪ್ರತಿಷ್ಠಾನದ ಸಭಾಭವನದಲ್ಲಿ ‘ಸೇವಾಂಜಲಿ ರಕ್ಷಕ’ ನಾಮಾಂಕಿತ ದೋಣಿಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. ತಾಲೂಕಿನ ವಿವಿದೆಡೆ ನೇತ್ರಾವತಿ ನದಿಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚಿನ ಕೆಲ ವರ್ಷಗಳಿಂದ ಹೆಚ್ಚಾಗಿದೆ. ನೇತ್ರಾವತಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಪದೇ ಪದೇ ಮರುಕಳಿಸುತ್ತಿದೆ. ಅಲ್ಲದೆ ಆಕಸ್ಮಿಕವಾಗಿ ನದಿಗೆ ಬಿದ್ದು ಕೊಚ್ಚಿ ಹೋಗುವಂತಹ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಈಜುಗಾರರು ನದಿಗೆ ಹಾರಿ ನೀರಲ್ಲಿ ಕೊಚ್ಚಿ ಹೋಗುತ್ತಿರುವರನ್ನು ಸ್ವಯಂ ಪ್ರೇರಿತರಾಗಿ ರಕ್ಷಿಸುವ ಪ್ರಯತ್ನ ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇವರಿಗೆ ದೋಣಿಯ ವ್ಯವಸ್ಥೆಯಾಗಲಿ, ಲೈಫ್ ಜಾಕೆಟ್‍ನಂತಹ ಮೂಲಭೂತ ಸೌಕರ್ಯಗಳಿಲ್ಲದೆ ಈಜುಗಾರರು ತಮ್ಮ  ಪ್ರಾಣವನ್ನು ಪಣಕ್ಕಿಟ್ಟು ಅಪಾಯಕಾರಿ ಸ್ಥಿತಿಯಲ್ಲಿ ಜೀವ ರಕ್ಷಿಸುವ ಪರಿಸ್ಥಿತಿ ಇದೆ. 

ಕಳೆದ ಮೇ 24 ರಂದು ಕಲ್ಲಡ್ಕ ನಿವಾಸಿ ನಿಶಾಂತ್ ಎಂಬ ಯುವಕ ನದಿ ನೀರಿಗೆ ಹಾರಿ ಆತ್ಮಹತ್ಯೆಗೈದಾಗ ಸ್ಥಳೀಯ ಈಜುಗಾರರು ಸೇತುವೆಯ ಮೇಲಿಂದ ನದಿಗೆ ಜಿಗಿದು ಯುವಕನ ಪ್ರಾಣ ರಕ್ಷಿಸಲು ಪ್ರಯತ್ನಿಸಿದ್ದರು.  ಈ ಸಂದರ್ಭ ಮಾಧ್ಯಮಗಳ ಮುಂದೆ ತಮ್ಮ ಕಾರ್ಯಕ್ಕೆ ನಾಡದೋಣಿ ಹಾಗೂ ಲೈಫ್ ಜಾಕೆಟ್ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಈ ಬೇಡಿಕೆಗೆ ಸ್ಪಂದಿಸಿದ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ದೋಣಿ ಹಾಗೂ ಲೈಫ್ ಜಾಕೆಟನ್ನು ಕೊಡುಗೆ ನೀಡಿ ಸಾಹಸಿ ಯುವಕರಲ್ಲಿ ಸ್ಪೂರ್ತಿ ತುಂಬುವ ಕಾರ್ಯ ಮಾಡಿದೆ.

ಕಾರ್ಯಕ್ರಮದಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ದೋಣಿ ಹಸ್ತಾಂತರ ಮಾಡಿದರು. ಅವರು ಮಾತನಾಡಿ ಜಾತಿ ಧರ್ಮ ನೋಡದೆ ಈ ಈಜುಗಾರರು ತಮ್ಮ ನಿಸ್ವಾರ್ಥ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ಮಳೆಗಾಲ ಬಂದಾಗಲೂ ಇವರು ತಾಲೂಕಾಡಳಿತದೊಂದಿಗೆ ಸಹಕರಿಸುತ್ತಿದ್ದಾರೆ. ಇವರ ಸೇವೆ ಮುಂದಿನ ದಿನಗಳಲ್ಲಿಯೂ ತಾಲೂಕಾಡಳಿತ ಹಾಗೂ ಎಲ್ಲರಿಗೂ ಅಗತ್ಯವಿದೆ ಎಂದರು.

ಲೈಫ್ ಜಾಕೆಟ್ ವಿತರಿಸಿ ಮಾತನಾಡಿದ ಬಂಟ್ವಾಳ ಗ್ರಾಮಾಂತರ ಠಾಣಾ ಎಸೈ ಪ್ರಸನ್ನ ಅವರು ಯಾವ  ಉದ್ದೇಶಕ್ಕೆ ದೋಣಿಯನ್ನು ನೀಡಲಾಗಿದೆಯೋ ಆ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಸೇವಾಂಜಲಿ ಪ್ರತಿಷ್ಠಾನ ಮಾನವೀಯ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಇದು ಇನ್ನೂ ಮುಂದುವರಿಯಲಿ ಎಂದರು. ಕಾರ್ಯಕ್ರಮದಲ್ಲಿ ಜೀವ ರಕ್ಷಕ ಯುವಕರನ್ನು ಸನ್ಮಾನಿಸಲಾಯಿತು. ಮಂಗಳೂರು ಶಾಸಕ ಯು ಟಿ ಖಾದರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಅಧ್ಯಕ್ಷ ವಜ್ರನಾಭ ಶೆಟ್ಟಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪ್ರಮುಖರಾದ ಅಮ್ಮುಂಜೆಗುತ್ತು ದೇವದಾಸ್ ಹೆಗ್ಡೆ, ಪಿ.ಎ. ರಹೀಂ, ಸದಾನಂದ ಆಳ್ವ ಕಂಪ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜಾ ಸ್ವಾಗತಿಸಿ, ಪಿ.ಎ. ರಹೀಂ ಪ್ರಸ್ತಾವನೆಗೈದರು. ತೇವು ತಾರಾನಾಥ ಕೊಟ್ಟಾರಿ ವಂದಿಸಿದರು. ನಿವೃತ್ತ ಶಿಕ್ಷಕ ಬಿ. ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.


  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ ಸೇವಾಂಜಲಿಯಿಂದ ಗೂಡಿನಬಳಿ ಈಜುಪಟುಗಳಿಗೆ ನಾಡದೋಣಿ ಹಾಗೂ ಜಾಕೆಟ್ ಕೊಡುಗೆ Rating: 5 Reviewed By: karavali Times
Scroll to Top