ಬೆಳ್ತಂಗಡಿ (ಕರಾವಳಿ ಟೈಮ್ಸ್) : ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯ ಇದರ ವತಿಯಿಂದ ದಾರುಲ್ ಅಮಾನ್ ವಸತಿ ಯೋಜನೆಯಡಿಯಲ್ಲಿ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಸಯ್ಯಿದ್ ಝೈನುಲ್ ಆಬಿದೀನ್ ಜಮಾಲುಲೈಲಿ ತಂಙಳ್ ಕಾಜೂರು ದಾರುಲ್ ಅಮಾನ್ ವಸತಿ ಯೋಜನೆಯಡಿಯಲ್ಲಿ ನಿರ್ಮಿಸಿದ ಮನೆಯನ್ನು ಉದ್ಘಾಟಿಸಿದರು. ಸಯ್ಯಿದ್ ಮುಹಮ್ಮದ್ ಇಂಬಿಚ್ಚಿ ಕೋಯ ತಂಙಳ್ ದುಆ ನೆರವೇರಿಸಿದರು. ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಮನೆಯ ಕೀ ಹಸ್ತಾಂತರಿಸಿದರು.
ಸೌದಿ ಅರೇಬಿಯಾ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅದ್ಯಕ್ಷ ಡಿ.ಪಿ. ಯೂಸುಫ್ ಸಖಾಫಿ ಬೈತಾರ್ ಮಾತನಾಡಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯಾ ದಾರುಲ್ ಅಮಾನ್ ವಸತಿ ಯೋಜನೆಯಡಿ ಬಡ ಕುಟುಂಬಗಳಿಗೆ ಆಸರೆ ಯಾಗಿ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಕೊಡುತ್ತಿದ್ದು, ಈಗಾಗಲೇ ಕರ್ನಾಟಕದ ಹಲವು ಭಾಗಗಳಲ್ಲಿ ಅನೇಕ ಅರ್ಹ ಬಡ ಕುಟುಂಬಗಳಿಗೆ ಮನೆ ಕಟ್ಟಲು ಸಹಾಯ ಧನ ಕೊಟ್ಟಿದೆ ಮತ್ತು ಹಲವು ಮನೆಗಳನ್ನು ದುರಸ್ತಿ ಮಾಡಿಸಿದೆ. ಇದೀಗ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ಬಡ ಕುಟುಂಬವೊಂದಕ್ಕೆ ಸುಮಾರು 600 ಚದರ ಅಡಿಯ ಮನೆಯನ್ನು ನಿರ್ಮಿಸಿದೆ ಎಂದರು.
ಕೆ.ಸಿ.ಎಫ್. ಇಂಟರ್‍ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಡಾ. ಶೈಖ್ ಬಾವ ಮಾತನಾಡಿ ಸುಮಾರು 7.50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮನೆ ನಿರ್ಮಿಸಲಾಗಿದೆ. ಮನೆಗೆ ಅವಶ್ಯಕವಾದ ಪೀಠೋಪಕರಣ ಸೇರಿದಂತೆ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿ ಕೊಡಲಾಗಿದೆ ಎಂದರು.
ಇದೇ ವೇಳೆ ಮನೆಯನ್ನು ಅಲ್ಪ ಕಾಲಾವಧಿಯಲ್ಲಿ ಉತ್ತಮವಾಗಿ ನಿರ್ಮಿಸಿದ ಯಾಕೂಬ್ ಮಲೆಬೆಟ್ಟು ಅವರನ್ನು ಸೌದಿ ಕೆ.ಸಿ.ಎಫ್. ನಾಯಕರು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ಅಬ್ದುಲ್ ರಶೀದ್ ಝೈನಿ, ಸೌದಿ ಅರೇಬಿಯಾ ಕೆ.ಸಿ.ಎಫ್. ರಾಷ್ಟ್ರೀಯ ನಾಯಕರಾದ ಹನೀಫ್ ಕಣ್ಣೂರ್, ಹಮೀದ್ ಮುಸ್ಲಿಯಾರ್ ಕರಾಯ, ಸಲೀಂ ಕನ್ಯಾಡಿ, ಶುಕೂರ್ ನಾಳ, ಇಬ್ರಾಹಿಂ ಕಾಜೂರು, ಬೆಳ್ತಂಗಡಿ ಮುಸ್ಲಿಂ ಜಮಾತ್ ಅಧ್ಯಕ್ಷ ಎಸ್.ಎಂ. ಕೋಯಾ ತಂಙಳ್, ಬೆಳ್ತಂಗಡಿ ಕರ್ನಾಟಕ ಮುಸ್ಲಿಂ ಜಮಾತ್, ಎಸ್ಸೆಸ್ಸೆಫ್, ಎಸ್.ವೈ.ಎಸ್. ನಾಯಕರು, ಸ್ಥಳೀಯ ಪಂಚಾಯತ್ ಸದಸ್ಯರುಗಳು ಭಾಗವಹಿಸಿದ್ದರು. ಕೆ.ಸಿ.ಎಫ್. ಸೌದಿ ಅರೇಬಿಯಾ ಸಂಘಟನಾ ಕಾರ್ಯದರ್ಶಿ ಬಶೀರ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.
Mashallah
ReplyDelete