ಬರೋಬ್ಬರಿ ಹತ್ತು ಮಂದಿ ಆಟಗಾರರಿಗೆ ಪಾಸಿಟಿವ್ ದೃಢ
ಇಡೀ ಟೂರ್ನಿ ಮೇಲೆಯೇ ಕೋವಿಡ್ ಕರಿಛಾಯೆ
ಇಸ್ಲಾಮಾಬಾದ್ (ಕರಾವಳಿ ಟೈಮ್ಸ್) : ಇಂಗ್ಲೆಂಡ್ ವಿರುದ್ಧ ಟೆಸ್ಟ್ ಹಾಗೂ ಟಿ-20 ಸೇರಿ ಸುದೀರ್ಘ ಕ್ರಿಕೆಟ್ ಟೂರ್ನಿಗೆ ಸಿದ್ಧತೆ ನಡೆಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇದೀಗ ಕೊರೊನಾ ವೈರಸ್ ಶಾಕ್ ನೀಡಿದ್ದು, ಬರೋಬ್ಬರಿ ಹತ್ತು ಮಂದಿ ಆಟಗಾರರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಇದೇ ಬರುವ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಇಂಗ್ಲೆಂಡ್‍ನಲ್ಲಿ ಮೂರು ಟೆಸ್ಟ್, ಮೂರು ಟಿ20 ಪಂದ್ಯಗಳನ್ನು ಪಾಕಿಸ್ತಾನ ಆಡಲು ಸಜ್ಜಾಗಿತ್ತು. ಇದಕ್ಕಾಗಿ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ 29 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಕೊರೊನಾ ಕಾರಣಕ್ಕಾಗಿ ಒಂದು ತಿಂಗಳು ಮುಂಚಿತವಾಗಿಯೇ ಇಂಗ್ಲೆಂಡ್‍ಗೆ ಆಟಗಾರರನ್ನು ಕಳುಹಿಸಿಕೊಡಲು ಸಿದ್ದತೆ ನಡೆಸಿತ್ತು.
ಆಟಗಾರರನ್ನು ಇಂಗ್ಲೆಂಡ್‍ಗೆ ಕಳುಹಿಸುವ ನಿಟ್ಟಿನಲ್ಲಿ ಆಟಗಾರರಿಗೆ ಕೊರೊನಾ ಟೆಸ್ಟ್ ಮಾಡಿತ್ತು. ಈ ಟೆಸ್ಟ್ ನಲ್ಲಿ ಆಟಗಾರರಾದ ಶದಾಬ್ ಖಾನ್, ಹೈದರ್ ಅಲಿ, ಹ್ಯಾರಿಸ್ ರೌಫ್‍ಗೆ ನಿನ್ನೆಯಷ್ಟೇ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಇಂದು ಮತ್ತೆ 7 ಆಟಗಾರರಿಗೆ ಕೊರೊನಾ ಪಾಸಿಟಿವ್ ದೃಢವಾಗಿರುವುದನ್ನು ಪಿಸಿಬಿ ಖಚಿತ ಪಡಿಸಿದೆ.
ಇಂದಿನ ವರದಿಯ ಅನ್ವಯ ಫಖರ್ ಜಮಾನ್, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್ ಮೊಹಮ್ಮದ್ ರಿಜ್ವಾನ್ ಮತ್ತು ವಹಾಬ್ ರಿಯಾಜ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಪಾಕಿಸ್ತಾನದ 10 ಕ್ರಿಕೆಟ್ ಆಟಗಾರಿಗೆ ಸೋಂಕು ದೃಢಪಟ್ಟಿದ್ದು ಆತಂಕ ಉಂಟು ಮಾಡಿದೆ.
ಪಿಸಿಬಿ ನೀಡಿರುವ ಮಾಹಿತಿಯ ಅನ್ವಯ ಇಂಗ್ಲೆಂಡ್ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿದ್ದ 27 ಆಟಗಾರರು ಹಾಗೂ ಸಿಬ್ಬಂದಿಗೆ ಸೇರಿ 35 ಮಂದಿಗೆ ಕೊರೊನಾ ಟೆಸ್ಟ್ ನಡೆಸಿತ್ತು. ಸದ್ಯ 10 ಮಂದಿಗೆ ಕೊರೊನಾ ದೃಢಪಟ್ಟಿರುವುದರಿಂದ ಬಹುನಿರೀಕ್ಷಿತ ಇಂಗ್ಲೆಂಡ್ ಟೂರ್ನಿ ಮೇಲೆ ಕೊರೊನಾ ಕರಿ ನೆರಳು ಆವರಿಸಿದೆ. ಪಾಕ್ ಹಾಗೂ ಇಂಗ್ಲೆಂಡ್ ವಿರುದ್ಧ ಟೂರ್ನಿಯನ್ನು ಸಂಪೂರ್ಣವಾಗಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ನಿರ್ವಹಿಸುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟಿಸಿತ್ತು. ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರರಾದ ತೌಫಿಖ್ ಉಮರ್, ಅಫ್ರಿದಿ ಈ ಹಿಂದೆಯೇ ಕೊರೊನಾ ಸೋಂಕಿಗೆ ಒಳಗಾಗಿದ್ದರು.
0 comments:
Post a Comment