ಉಡುಪಿ (ಕರಾವಳಿ ಟೈಮ್ಸ್) : ಉಡುಪಿ ಜಿಲ್ಲೆಯ ಪಾಲಿಗೆ ಕೊರೋನಾ ವೈರಸ್ ಕೇವಲ ಒಂದೇ ತಿಂಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ. ಮೇ 15ರವರೆಗೂ ಗ್ರೀನ್ ಝೋನ್ ಆಗಿ ಕೊರೋನಾ ಮುಕ್ತವಾಗಿದ್ದ ಉಡುಪಿಯಲ್ಲಿ ಇದೀಗ ಒಂದು ತಿಂಗಳ ಅಂತರದಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ಶನಿವಾರ ಜಿಲ್ಲೆಯಲ್ಲಿ 14 ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 1005ಕ್ಕೇರಿದೆ.
ಸಾವಿರ ಕೊರೊನಾ ಪ್ರಕರಣ ದಾಖಲಾದ ಮೊದಲ ಜಿಲ್ಲೆಯಾಗಿ ಇದೀಗ ಉಡುಪಿ ಕಾಣಿಸಿಕೊಂಡಿದೆ. ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಆಗಮಿಸಿದವರಲ್ಲಿಯೇ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದ್ದು, ಶನಿವಾರ ಕಾಣಿಸಿಕೊಂಡ 14 ಪ್ರಕರಣಗಳಲ್ಲಿ 8 ಪುರುಷರು, 5 ಮಹಿಳೆಯರು ಹಾಗೂ 6 ವರ್ಷದ ಬಾಲಕಿ ಸೇರಿದ್ದಾರೆ.
ಮೇ 15ರ ವರೆಗೆ ಉಡುಪಿ ಜಿಲ್ಲೆಯಲ್ಲಿ ಕೇವಲ 3 ಮಂದಿಯಲ್ಲಿ ಕೊರೊನಾ ಕಂಡುಬಂದಿತ್ತು. ಹೀಗಾಗಿ ಜಿಲ್ಲೆ ಗ್ರೀನ್ ಝೋನ್ ಪಟ್ಟಿಯಲ್ಲಿತ್ತು. ಆದರೆ ಮೇ 15 ರಂದು ಮತ್ತೆ ಸೋಂಕು ಕಾಣಿಸಿಕೊಂಡ ನಂತರ ಏಕಾಏಕಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.
ಉಡುಪಿಯಲ್ಲಿ 1005 ಪ್ರಕರಣಗಳ ಪೈಕಿ 584 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 420 ಪ್ರಕರಣ ಸಕ್ರಿಯವಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ 1005 ಸೋಂಕು ಪ್ರಕರಣದಲ್ಲಿ 964 ಮಂದಿ ಮಹಾರಾಷ್ಟ್ರ ರಾಜ್ಯವೊಂದರಿಂದಲೇ ಬಂದವರಾಗಿದ್ದಾರೆ. ಇನ್ನು ವಿದೇಶ, ಹೊರ ರಾಜ್ಯದಿಂದ ಬಂದ 59 ಜನರಲ್ಲಿ ಕೊರೋನಾ ಸೋಂಕು ಕಾಣಿಸಿದೆ. ಜಿಲ್ಲೆಗೆ ಇನ್ನೂ 7,000 ಜನ ಬರಲಿದ್ದು, ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭವಾಗಿದೆ.
0 comments:
Post a Comment