ಮಂಗಳೂರು (ಕರಾವಳಿ ಟೈಮ್ಸ್) : ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಸೋಮವಾರ ನಗರದ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಸೈಕಲ್ ಚಳವಳಿ ನಡೆಸಿತು.
ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್, ಭಾರತ ದೇಶದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಂಧನ ಬೆಲೆ ಗಗನಕ್ಕೇರಿದೆ. ಕಚ್ಚಾ ತೈಲದ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದರೂ ಪ್ರಪಂಚದ ಯಾವುದೇ ದೇಶದಲ್ಲಿ ಇರದಷ್ಟು ಬೆಲೆ ಏರುತ್ತಲೇ ಇದೆ ಎಂದರು.
ಯುಪಿಎ ಸರಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‍ಗೆ 140 ಡಾಲರ್ ಇದ್ದ ಸಂದರ್ಭದಲ್ಲಿಯೂ ಸರಕಾರ 60 ರೂಪಾಯಿಗೆ ಪೆಟ್ರೋಲ್ ನೀಡಿತ್ತು. ಇವತ್ತು ಕಚ್ಚಾ ತೈಲದ ಬೆಲೆ ಬ್ಯಾರಲ್‍ಗೆ 30-35ರ ಆಸುಪಾಸಿನಲ್ಲಿದ್ದರೂ ಪೆಟ್ರೋಲ್ ಬೆಲೆ 82 ರೂಪಾಯಿಗೆ ಏರಿದೆ. ಇದು ಕೇಂದ್ರ ಸರಕಾರ ಹಗಲು ದರೋಡೆ ಮಾಡಿದಂತಿದೆ ಎಂದು ಕಿಡಿಕಾರಿದರು.
ಒಂದು ಕಡೆ ನೋಟ್ ಬ್ಯಾನ್, ಜಿಎಸ್‍ಟಿ. ಕೊರೋನಾ, ಲಾಕ್‍ಡೌನ್‍ಗಳಿಂದ ಜನ ಜೀವನ ತತ್ತರಿಸಿ ಹೋಗಿದ್ದು, ಬೆಲೆ ಏರಿಕೆ ಮತ್ತಷ್ಟು ಬಡಜನರ ಮೇಲೆ ಪರಿಣಾಮ ಬೀರಿದೆ. ಸರಕಾರ ವೈಫಲ್ಯತೆಗಳಿಂದಾಗಿ ವಾಣಿಜ್ಯ ನೀತಿ, ವಿದೇಶಿ ನೀತಿಯ ತಪ್ಪು ನಿರ್ವಹಣೆಗೆ ಕಾರಣವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಸಂಪೂರ್ಣ ವಿಫಲವಾಗಿದ್ದು. ಶೀಘ್ರವೇ ತೈಲ ಬೆಲೆ ಹತೋಟಿಗೆ ತರಬೇಕೆಂದು ಕಾಂಗ್ರೆಸ್ ಆಗ್ರಹಿಸುತ್ತದೆ. ಕೋವಿಡ್-19ನಿಂದಾಗಿ ಜನ ಜೀವನ ಈಗಾಗಲೇ ತತ್ತರಿಸಿಹೋಗಿದ್ದು, ಪ್ರಧಾನಿ ಮತ್ತು ಶಿಷ್ಯರು ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹುಟ್ಟಿದಂತಹ ಪಕ್ಷ. ಇದಕ್ಕೆ 135 ವರ್ಷಗಳ ಇತಿಹಾಸ ಇದೆ. ಕಾಂಗ್ರೆಸ್ ಪಕ್ಷ ಗಾಂಧಿ ತತ್ವದಲ್ಲಿ ನಂಬಿಕೆ ಇಟ್ಟು ಸತ್ಯಾಗ್ರಹ ಮಾಡುತ್ತಿದೆ. ಆದರೆ, ಬಿಜೆಪಿ ಗೋಡ್ಸೆ ವಾದವನ್ನು ಮುಂದಿಟ್ಟುಕೊಂಡು ಸರಕಾರ ನಡೆಸುತ್ತಿದೆ ಎಂದ ಹರೀಶ್ ಕುಮಾರ್ ದಯವಿಟ್ಟು ಕಾಂಗ್ರೆಸ್ ಮುಕ್ತ ಮಾಡುವ ಮಾತನ್ನು ಬದಿಗಿರಿಸಿ ಕರೋನಾ ಮುಕ್ತ ದೇಶವನ್ನಾಗಿ ಮಾಡಲು ಪ್ರಧಾನಿ ಮೋದಿ ಅವರು ಶ್ರಮಿಸಬೇಕೆಂದು ವಿನಂತಿಸುವುದಾಗಿ ವ್ಯಂಗ್ಯವಾಡಿದರು.
ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜಾ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ. ಸಲೀಂ, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್, ಕಾಪೆರ್Çೀರೇಟರ್‍ಗಳಾದ ಶಶಿಧರ್ ಹೆಗಡೆ, ನವೀನ್ ಡಿ’ಸೋಜಾ, ಸಂಶುದ್ದೀನ್ ಕುದ್ರೋಳಿ, ಅಶ್ರಫ್, ಅನಿಲ್ ಕುಮಾರ್, ಎ.ಸಿ. ವಿನಯರಾಜ್, ಪ್ರಕಾಶ್ ಸಾಲಿಯಾನ್, ಡಿ.ಕೆ. ಅಶೋಕ್, ನೀರಜ್ ಪಾಲ್, ಶಂಶುದ್ದೀನ್ ಬಂದರ್, ಪ್ರಮುಖರಾದ ಚೇತನ್ ಕುಮಾರ್, ಲಿಯಾಖತ್ ಶ್ಹಾ, ವಹಾಬ್, ಪದ್ಮನಾಭ ಅಮೀನ್, ನಝೀರ್ ಬಜಾಲ್, ಪ್ರೇಮ್ ಬಳ್ಳಾಲ್‍ಭಾಗ್, ದಿನೇಶ್ ರಾವ್, ಸುರೇಶ್ ಶೆಟ್ಟಿ, ಜೆ. ನಾಗೇಂದ್ರ, ಗಿರೀಶ್ ಶೆಟ್ಟಿ, ಯೂಸುಫ್, ಇಮ್ರಾನ್ ಎ.ಆರ್., ಯಶವಂತ್ ಪ್ರಭು, ಯೋಗಿಶ್ ನಾಯಕ್, ಶಾಂತಲಾ ಗಟ್ಟಿ, ನಮಿತಾ ಡಿ. ರಾವ್, ಜೆಸಿಂತಾ ಆಲ್ಫ್ರೆಡ್, ರತಿಕಲಾ, ಕವಿತಾ ವಾಸು, ವಿಕ್ಟೋರಿಯಾ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment