ಬಂಟ್ವಾಳ (ಕರಾವಳಿ ಟೈಮ್ಸ್) : ಬ್ಯಾರಿ ಹಾಡುಗಾರ, ಬಿ.ಸಿ.ರೋಡು ಸಮೀಪದ ಪರ್ಲಿಯಾ-ನಂದರಬೆಟ್ಟು ನಿವಾಸಿ ಕೆ.ಎಂ. ಮುಹಮ್ಮದ್ ಶರೀಫ್ (54) ಅವರು ಹೃದಯಾಘಾತದಿಂದ ಸೋಮವಾರ ಅಪರಾಹ್ನ ನಿಧನರಾಗಿದ್ದಾರೆ.
ಹಲವು ಕಾರ್ಯಕ್ರಮಗಳಲ್ಲಿ ಇವರು ತಮ್ಮ ಹಾಡುಗಾರಿಕೆ ಪ್ರಸ್ತುತಪಡಿಸಿ ಹಿರಿಯ ಹಾಡುಗಾರರೆನಿಸಿಕೊಂಡಿದ್ದರು. ಇವರು ಸ್ವಯಂ ರಚಿಸಿ ಹಾಡುತ್ತಿದ್ದರಲ್ಲದೆ ಇತರರ ಸಾಹಿತ್ಯಗಳಿಗೂ ಧ್ವನಿಗೂಡಿಸಿ ಪ್ರಸಿದ್ದಿ ಪಡೆದಿದ್ದರು.
ತೀರಾ ಇತ್ತೀಚೆಗೆ ಲಾಕ್ ಡೌನ್ ನಡುವೆಯೂ ರಂಝಾನ್ ಸಂದರ್ಭ ತನ್ನ ಜೀವಮಾನದ ಕೊನೆಯ ಹಾಡು 'ಇತಿಹಾಸತ್ತೆ ಪೆರ್ನಾಳ್' ಹಾಡಿದ್ದು, ಸಾಮಾಜಿಕ ತಾಣಗಳಲ್ಲಿ ಜನಮನ್ನಣೆ ಗಳಿಸಿತ್ತು.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಈ ಹಿಂದೆಯೂ ಒಂದು ಬಾರಿ ಹೃದಯಾಘಾತ ಉಂಟಾಗಿದ್ದು ಬಳಿಕ ಚೇತರಿಸಿಕೊಂಡಿದ್ದರು ಎನ್ನಲಾಗಿದೆ. ಸೋಮವಾರ ಮಧ್ಯಾಹ್ನ ಕೂಡಾ ಇವರಿಗೆ ಹೃದಯ ಬೇನೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ, ಐವರು ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
0 comments:
Post a Comment