ಸೀಸಿ ಟಿವಿ ಫೂಟೇಜ್ ಪರಿಶೀಲಿಸಿ ಕ್ರಮಕ್ಕೆ ಮುಂದಾದ ಬಂಟ್ವಾಳ ಪೊಲೀಸರು
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಶಾರದಾ ಹೈಸ್ಕೂಲ್ ಮುಂಭಾಗದ ರಸ್ತೆಯಲ್ಲೇ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕರ ಎರಡು ಗುಂಪು ತಲವಾರು-ರಾಡ್ ಹಿಡಿದುಕೊಂಡು ಬೀದಿ ಕಾಳಗ ನಡೆಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಮುಲ್ಕಿಯಲ್ಲಿ ನಡೆದ ತಲವಾರು ಕಾಳಗದಲ್ಲಿ ಅಮಾಯಕ ಮುಸ್ಲಿಂ ಯುವಕರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಇದೀಗ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲೂ ಯುವಕರು ತಲವಾರು ಹಿಡಿದು ಬಡಿದಾಡಿಕೊಂಡಿರುವ ಘಟನೆ ನಡೆದಿರುವುದು ಇಲ್ಲಿನ ಮುಸ್ಲಿಂ ವಲಯದಲ್ಲೂ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ನಂದಾವರ ನಿವಾಸಿ ಮುಸ್ತಫಾ ನೇತೃತ್ವದ ಸ್ಥಳೀಯ ಯುವಕರ ಒಂದು ಗುಂಪು ಹಾಗೂ ಇನ್ನೊಂದು ಗುಂಪು ಅಡ್ಯಾರ್ ಸಮೀಪದ ಯುವಕರದ್ದೆಂದು ಹೇಳಲಾಗಿದೆ. ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಹಳೆ ದ್ವೇಷದಿಂದ ಈ ಎರಡು ಗುಂಪುಗಳ ಮಧ್ಯೆ ಈ ಘರ್ಷಣೆ ನಡೆದಿದೆ ಎನ್ನಲಾಗಿದೆ. ನಂದಾವರ ಸಮೀಪದ ಬಂಗ್ಲೆಗುಡ್ಡೆ ರೈತರ ಸೇವಾ ಸಹಕಾರಿ ಬ್ಯಾಂಕ್ ಮುಂಭಾಗದಲ್ಲಿ ಪ್ರಥಮ ಹಂತದಲ್ಲಿ ಚಕಮಕಿ ನಡೆಸಿಕೊಂಡ ಎರಡು ಯುವಕರ ತಂಡ ಬಳಿಕ ಶಾರದಾ ಹೈಸ್ಕೂಲ್ ಮುಂಭಾಗಕ್ಕೆ ಬಂದು ಅಲ್ಲಿ ರಸ್ತೆಯಲ್ಲೇ ಮಾರಕಾಯುಧಗಳನ್ನು ಝಳಪಿಸುತ್ತಾ ಹೊಡೆದಾಡಿಕೊಂಡಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಬಳಿಕ ಸ್ಥಳೀಯರು ಮಧ್ಯ ಪ್ರವೇಶಿಸಿ ಎರಡೂ ಗುಂಪುಗಳನ್ನು ಸ್ಥಳದಿಂದ ಕಳುಹಿಸಿದೆ.
ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಸ್ಥಳೀಯವಾಗಿ ಇರುವ ಮೂರ್ನಾಲ್ಕು ಸೀಸಿ ಟೀವಿಗಳ ಫೂಟೇಜ್ ಪಡೆದುಕೊಂಡು ಆರೋಪಿಗಳ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದಾರೆ. ರಾತ್ರಿವರೆಗೂ ನಂದಾವರ ಪರಿಸರದಲ್ಲಿ ಗಸ್ತು ಹೆಚ್ಚಿಸಿದ ಪೊಲೀಸರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ರಾತ್ರಿವರೆಗೂ ಎರಡೂ ತಂಡದ ಯಾರೂ ಕೂಡಾ ಠಾಣೆಯಲ್ಲಿ ದೂರು ದಾಖಲಿಸಿಲ್ಲ. ಘಟನೆಗೆ ಸಂಬಂಧಪಟ್ಟಂತೆ ಇರ್ಟಿಕಾ ಕಾರೊಂದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment