ಬೆಂಗಳೂರು-ಯಲಹಂಕದಲ್ಲಿ ಭಾನುವಾರ ನಡೆದ ಘಟನೆ
ಬೆಂಗಳೂರು (ಕರಾವಳಿ ಟೈಮ್ಸ್) : ಬೈಕಿನಲ್ಲಿ ವ್ಹೀಲಿಂಗ್ ಸ್ಟಂಟ್ ಪ್ರದರ್ಶಿಸಿದ ಮೂವರು ಯುವಕರು ಅಪಘಾತಕ್ಕೀಡಾಗಿ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕ ಸಮೀಪ ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಮೃತರು ಬೆಂಗಳೂರಿನ ಗೋವಿಂದಪುರ ಪ್ರದೇಶದ ನಿವಾಸಿಗಳೆನ್ನಲಾಗಿದ್ದು, ಮಹಮ್ಮದ್ ಆದಿ ಆಯಾನ್ (16), ಮಾಜ್ ಅಹಮ್ಮದ್ ಖಾನ್ (17) ಹಾಗೂ ಸಯ್ಯದ್ ರಿಯಾಜ್ (22) ಎಂದು ಗುರುತಿಸಲಾಗಿದೆ.
ಭಾನುವಾರ ಮುಂಜಾನೆ ರಸ್ತೆ ಖಾಲಿಯಿದೆ ಎಂದು ಬೈಕಿನಲ್ಲಿ ಹೊರಟ ಯುವಕರು ಹುರುಪಿನಿಂದ ಸ್ಟಂಟ್ ಮಾಡಿದ್ದಾರೆ. ಹೆಲ್ಮೆಟ್ ಕೂಡಾ ಧರಿಸದೆ ಅಪಾಯಕಾರಿ ವ್ಹೀಲಿಂಗ್ ನಡೆಸಿದ ವೇಳೆ ಬೈಕ್ ಸ್ಕಿಡ್ ಆಗಿ ಮುಖಾಮುಖಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆಯಿಂದ ಬೈಕ್ ಚಿಪ್ಪಾಚೂರಾಗಿದ್ದು, ತಲೆ ಅಪ್ಪಚ್ಚಿಯಾಗಿ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಯುವಕರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತುಗಳು
0 comments:
Post a Comment