ಸಚಿವರು, ಶಾಸಕರಿಂದ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಮಾಧ್ಯಮಗಳ ಮುಂದೆ ಬಂದ ಅತಂತ್ರ ಮಹಿಳಾ ಸಿಬ್ಬಂದಿಗಳು
ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-10 ಸಂಧಿಗ್ಧ ಪರಿಸ್ಥಿತಿಯಲ್ಲಿ ಅಟಲ್ ಜೀ ಜನ ಸ್ನೇಹಿ ಕೇಂದ್ರದ ಡಾಟ ಎಂಟ್ರಿ ಆಪರೇಟರ್ ಮಹಿಳಾ ಸಿಬ್ಬಂದಿಗಳನ್ನು ಯಾವುದೇ ಪೂರ್ವ ಮಾಹಿತಿ ಇಲ್ಲದೆ ಏಕಾಏಕಿ ದಿಢೀರ್ ಆಗಿ ಕೆಲಸದಿಂದ ತೆಗೆದು ಹಾಕಿರುವ ಸಿಬ್ಬಂದಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಲಸದಿಂದ ವಜಾಗೊಂಡ ಸಿಬ್ಬಂದಿಗಳಾದ ಪ್ರಮೀಳಾ, ಪೂಜಾಶ್ರೀ, ಗುಣಶ್ರೀ, ನಮಿತಾ ಹಾಗೂ ಭವ್ಯ ಅವರು ಸಮೃದ್ದಿ ಎಂಬ ಗುತ್ತಿಗೆ ಸಂಸ್ಥೆಯ ಅಧೀನದಲ್ಲಿ ನಾವು ಬಂಟ್ವಾಳ, ಪಾಣೆಮಂಗಳೂರು ಹಾಗೂ ವಿಟ್ಲ ಹೋಬಳಿಯ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‍ಗಳಾಗಿ ಕೆಲಸ ನಿರ್ವಹಿಸುತ್ತಿದ್ದು, ಮಾರ್ಚ್ 22ವರೆಗೆ ಕೆಲಸ ನಿರ್ವಹಿಸಿದ್ದೇವೆ. ಆದರೆ ಆ ಬಳಿಕ ಯಾವುದೇ ಪೂರ್ವ ಸೂಚನೆ ಇಲ್ಲದೆ ದಿಢೀರ್ ನಮ್ಮನ್ನು ಕೆಲಸದಿಂದ ವಜಾ ಮಾಡಲಾಗಿರುತ್ತದೆ ಎಂದು ಅಲವತ್ತುಕೊಂಡರು.
ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ನಮಗೆ ಇದೀಗ ನೆಲೆ ಇಲ್ಲದಂತಾಗಿದ್ದು, ಕೆಲಸ ಕಳೆದುಕೊಂಡ ಪರಿಣಾಮ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕೋವಿಡ್ ಸಮಯದಲ್ಲಿ ಕೆಲ ದಿನಗಳ ಕಾಲ ಕೆಲಸಕ್ಕೆ ಕರೆದು ಡಾಟಾ ಎಂಟ್ರಿ ಮಾಡಿಸಲಾಗಿದೆ. ಆದರೆ ಇದುವರೆಗೂ ವೇತನ ನೀಡಿಲ್ಲ ಎಂದು ಆರೋಪಿಸಿದ ಅವರು ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಜಿಲ್ಲೆಯ ಶಾಸಕರುಗಳೊಂದಿಗೂ ನಮ್ಮ ಅಹವಾಲನ್ನು ಹೇಳಿಕೊಂಡಿದ್ದೇವೆ. ಆದರೆ ನೋಡುವ ಎಂಬ ಉತ್ತರ ದೊರೆತದ್ದು ಬಿಟ್ಟರೆ ಬೇರೆ ಯಾವುದೇ ಬದುಕಿನ ಭದ್ರತೆ ನಮಗೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏಕಾಏಕಿ ಕೆಲಸದಿಂದ ನಮ್ಮನ್ನು ಕೈ ಬಿಟ್ಟಿರುವುದರಿಂದ ನಾವು ಇದೀಗ ಬದುಕುವ ದಾರಿಯನ್ನೇ ಕಳೆದುಕೊಂಡಿದ್ದೇವೆ. ಕಳೆದ ಒಂದೂವರೆ ತಿಂಗಳಿಂದ ಕೆಲಸ ಇಲ್ಲದೆ ನಾವು ಅತಂತ್ರರಾಗಿದ್ದೇವೆ ಎಂದು ಅಲವತ್ತುಕೊಂಡ ಮಹಿಳಾ ಸಿಬ್ಬಂದಿಗಳು ಜಿಲ್ಲೆಯಲ್ಲಿ ನಾವು 17 ಮಂದಿ ಕೆಲಸ ಕಳೆದುಕೊಂಡಿದ್ದು, ಬಂಟ್ವಾಳ ತಾಲೂಕಿನಲ್ಲಿ ನಾಲ್ಕು ಮಂದಿ ಕೆಲಸ ಕಳೆದುಕೊಂಡಿದ್ದೇವೆ ಎಂದರು.
ಕೋವಿಡ್ ಸಂಕಷ್ಟದ ಸಂದರ್ಭ ಯಾವುದೇ ಕಂಪೆನಿಗಳು ನೌಕರರನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ ಎಂದು ಸರಕಾರ ಆದೇಶ ನೀಡಿದರೂ ನಮ್ಮನ್ನು ಇದೇ ಸಂದರ್ಭದಲ್ಲಿ ಕೆಲಸದಿಂದ ತೆಗೆದು ಹಾಕಲಾಗಿದೆ. ಕೊರೋನಾ ಸಂದರ್ಭದಲ್ಲಿ ನಮಗೆ ಎಲ್ಲಿಯೂ ಕೆಲಸ ದೊರೆಯುವ ಸಾಧ್ಯತೆ ಇಲ್ಲದೆ ಇರುವುದರಿಂದ ನಮ್ಮ ಬದುಕು ಇದೀಗ ಅಕ್ಷರಶಃ ಅತಂತ್ರವಾಗಿದೆ. ಸರಕಾರ ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳುವುದು ಎಷ್ಟರಮಟ್ಟಿಗೂ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಡಿಸಿದರು. .
ಕಳೆದ ಮೂರು ತಿಂಗಳು ನಾವು ದುಡಿದದ್ದಕ್ಕೂ ಸಂಬಳ ನೀಡದೆ ಸತಾಯಿಸಲಾಗಿದೆ ಎಂದು ಆರೋಪಿಸಿದ ಮಹಿಳಾ ಸಿಬ್ಬಂದಿಗಳು ಜಿಲ್ಲಾಧಿಕಾರಿಗಳು, ತಾಲೂಕು ತಹಶೀಲ್ದಾರರೂ ಕೂಡಾ ನಮ್ಮ ಅತಂತ್ರತೆಯ ಬಗ್ಗೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಏನಿದ್ದರೂ ಸರಕಾರಿ ಮಟ್ಟದಲ್ಲೇ ಆಗಬೇಕಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುವ ಮೂಲಕ ಕೈ ಚೆಲ್ಲಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದರು.
0 comments:
Post a Comment