ಬೆಂಗಳೂರು (ಕರಾವಳಿ ಟೈಮ್ಸ್) : ಕೇಂದ್ರ ಸರ್ಕಾರದ ಸಿಎಎ ಕಾಯ್ದೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಬಂಧನಕ್ಕೊಳಗಾಗಿದ್ದ ವಿದ್ಯಾರ್ಥಿ ನಾಯಕಿ ಅಮೂಲ್ಯ ಲಿಯೋನಾಗೆ ನಗರದ ಸಿಟಿ ಸಿವಿಲ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅಮೂಲ್ಯ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಇಂದು ರಾತ್ರಿ ಜಾಮೀನು ಮಂಜೂರು ಮಾಡಿದೆ. ಅರ್ಜಿದಾರರ ಪರ ವಾದಿಸಿದ ವಕೀಲರು, ಅರ್ಜಿದಾರರಾದ ಅಮೂಲ್ಯ ಇನ್ನೂ 19 ವರ್ಷ ವಯಸ್ಸಿನ ಯುವತಿ. ನಗರದ ಖಾಸಗಿ ಕಾಲೇಜೊಂದರಲ್ಲಿ ಓದುತ್ತಿದ್ದಾರೆ. ಅವರು ಪಾಕಿಸ್ತಾನ ಜಿಂದಾಬಾದ್ ಎಂದಷ್ಟೇ ಕೂಗಿದ್ದಾರೆ. ಪಾಕಿಸ್ತಾನವನ್ನು ನಮ್ಮ ದೇಶ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಮತ್ತು ಘೋಷಣೆ ಮಾಡಿಲ್ಲ. ಹೀಗಾಗಿ, ಜಾಮೀನು ನೀಡಬೇಕೆಂದು ಮನವಿ ಮಾಡಿದರು.
ಈ ಹಿಂದೆ 19 ವರ್ಷದ ಅಮೂಲ್ಯ ಲಿಯೋನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ನ್ಯಾಯಮೂರ್ತಿ ವಿದ್ಯಾಧರ್ ಶಿರಹಟ್ಟಿ ತಿರಸ್ಕರಿಸಿದ್ದರು. ಪ್ರಕರಣದ ಬಗ್ಗೆ ತನಿಖೆ ಪೂರ್ಣಗೊಳ್ಳದಿರುವುದು ಹಾಗೂ ಪೊಲೀಸ್ ಅಧಿಕಾರಿಗಳು ಇದುವರೆಗೂ ಚಾರ್ಜ್‌ಶೀಟ್ ಸಲ್ಲಿಸಿಲ್ಲವಾದ್ದರಿಂದ ಜಾಮೀನು ಅರ್ಜಿ ವಜಾಗೊಳಿಸಲಾಗಿತ್ತು. ಇದೀಗ ಸಿಟಿ ಸಿವಿಲ್ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಕಳೆದ ಫೆ.20 ರಂದು ಕೆಲ ಸಂಘಟನೆಗಳು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಮೂಲ್ಯ ಲಿಯೋನ್ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದರು. ನಂತರ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ವಿರುದ್ಧ ಐಪಿಸಿ ಸೆಕ್ಷನ್ 124(ಎ), 153(ಎ)(ಬಿ), 505(2) ಅಡಿ ದೇಶದ್ರೋಹ, ಸಾಮಾಜಿಕ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅಂದಿನಿಂದ ಜೈಲಿನಲ್ಲಿದ್ದ ಅಮೂಲ್ಯ ಜಾಮೀನಿಗಾಗಿ ನಿರಂತರ ಪ್ರಯತ್ನ ನಡೆಸಿದ್ದರು.
0 comments:
Post a Comment