ಬೆಂಗಳೂರು (ಕರಾವಳಿ ಟೈಮ್ಸ್) : ಮಂಗಳೂರು ಹಾಗೂ ಬೆಳಗಾವಿ ಪೊಲೀಸ್ ಕಮಿಷನರ್ ಸೇರಿದಂತೆ ರಾಜ್ಯದ 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಪೊಲೀಸ್ ಇಲಾಖೆ ಆಡಳಿತ ವಿಭಾಗದ ಐಜಿಪಿ ಆಗಿದ್ದ ಸೀಮಂತ್‌ಕುಮಾರ್ ಸಿಂಗ್ ಅವರನ್ನು ಕೇಂದ್ರ ವಿಭಾಗದ ಐಜಿಪಿಯಾಗಿ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಕೆ.ವಿ. ಶರತ್‌ಚಂದ್ರ ಅವರನ್ನು ನಿಯೋಜಿಸಲಾಗಿದೆ.
ಮಂಗಳೂರು ಕಮಿಷನರ್ ಆಗಿದ್ದ ಡಾ. ಪಿ.ಎಸ್. ಹರ್ಷ ಅವರನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ವಿಕಾಸ್ ಕುಮಾರ್ ನಿಯುಕ್ತಿಗೊಂಡಿದ್ದಾರೆ. ವಾರ್ತಾ ಇಲಾಖೆ ಆಯುಕ್ತರಾಗಿದ್ದ ಎಸ್.ಎನ್. ಸಿದ್ದರಾಮಪ್ಪ ಅವರನ್ನು ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಡಿಐಜಿಪಿ ಆಗಿ ವರ್ಗಾಯಿಸಲಾಗಿದೆ.
ಬೆಳಗಾವಿ ಪೊಲೀಸ್ ಕಮಿಷನರ್ ಆಗಿದ್ದ ಬಿ.ಎಸ್. ಲೋಕೇಶ್‌ಕುಮಾರ್ ಅವರನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಡಿಐಜಿಪಿ ಆಗಿ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಕೆ. ತ್ಯಾಗರಾಜನ್ ಅವರನ್ನು ನೇಮಕ ಮಾಡಲಾಗಿದೆ.
ಕೊಡಗು ಎಸ್.ಪಿ. ಸುಮನ್ ಪೆನ್ನೆಕರ್ ಅವರನ್ನು ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಜಿಪಿ ಆಗಿ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಕ್ಷಮಾ ಮಿಶ್ರಾ ಅವರನ್ನು ನೇಮಿಸಲಾಗಿದೆ.
ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡ್ಯ ಅವರನ್ನು ಗುಪ್ತದಳದ ಎಸ್ಪಿಯಾಗಿ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಎಚ್. ಅಕ್ಷಯ್ ಮಚ್ಚಿಂದ್ರ ಅವರು ವರ್ಗಾವಣೆಗೊಂಡಿದ್ದಾರೆ.
ಚಾಮರಾಜನಗರ ಎಸ್ಪಿ ಎಚ್.ಡಿ. ಆನಂದ್‌ಕುಮಾರ್ ಅವರನ್ನು ಆಂತರಿಕ ಭದ್ರತಾ ದಳದ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ದಿವ್ಯಾ ಸಾರಾ ಥಾಮಸ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
0 comments:
Post a Comment