ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಪೈಪ್ ದುರಸ್ತಿ ಪರಿಣಾಮ ಒಂದೆರಡು ದಿನ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಪುರವಾಸಿಗಳು ಲಾಕ್‍ಡೌನ್ ಮಧ್ಯೆ ತೀವ್ರ ಸಂಕಷ್ಟ ಎದುರಿಸುವಂತಾಗಿತ್ತು. ಈ ಮಧ್ಯೆ ಬಂಟ್ವಾಳ ಪುರಸಭೆಯ ವಾರ್ಡ್ ಸಂಖ್ಯೆ 7 ರ ಕೆಳಗಿನ ಪೇಟೆ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಸಂದರ್ಭ ಸ್ಥಳೀಯ ನಿವಾಸಿ ರಫೀಕ್ ಬಂಟ್ವಾಳ ಅವರು ತನ್ನ ಸ್ವಂತ ಖರ್ಚಿನಿಂದ ಸ್ಥಳೀಯರಿಗೆ ಕುಡಿಯುವ ನೀರು ಒದಗಿಸಿಕೊಟ್ಟು ಆಪದ್ಬಾಂಧವರಾದ ಬಗ್ಗೆ ಸ್ಥಳೀಯ ನಿವಾಸಿಗಳು ಬಹುಪರಾಕ್ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರ ರಂಝಾನ್ ಉಪವಾಸ ವೃತದ ಸಂದರ್ಭ ಕುಡಿಯುವ ನೀರು ಅತ್ಯಾವಶ್ಯಕವಾಗಿದ್ದು, ಈ ಸಂದರ್ಭ ರಫೀಕ್ ಅವರ ಸೇವೆ ಅತ್ಯಂತ ಉಪಕಾರಪ್ರದವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯವಾಗಿ ಕಾಂಗ್ರೆಸ್ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ರಫೀಕ್ ಅವರು ಜಾತಿ-ಮತ, ಧರ್ಮ ಬೇಧ ಮರೆತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರುಣ್ಯ ಸೇವೆಯನ್ನು ನಿರಂತರವಾಗಿ ಮಾಡುವ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಸ್ಥಳೀಯವಾಗಿ ಔಷಧಿ ಅಗತ್ಯವಿರುವ ರೋಗಿಗಳಿಗೆ ಸ್ವಯಂ ಹಾಗೂ ದಾನಿಗಳ ಸಹಕಾರದಿಂದ ನಿರಂತರವಾಗಿ ಸಹಕಾರ ನೀಡುವ ಗುಣವನ್ನು ರೂಢಿಸಿಕೊಂಡಿರುವ ರಫೀಕ್ ಅವರು ಸ್ಥಳೀಯವಾಗಿ ಉಚಿತ ಸಾಮೂಹಿಕ ವಿವಾಹಗಳಂತಹ ಸಾಮೂಹಿಕ ಸೇವಾ ಕಾರ್ಯಕ್ರಮಗಳಲ್ಲೂ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎನ್ನುವ ಸ್ಥಳೀಯರು ಸಾಮಾಜಿಕ ಸೇವಾ ಹಾಗೂ ಕಾರುಣ್ಯ ಸೇವೆಗೈಯುವ ಇಂತಹ ವ್ಯಕ್ತಿಗಳ ಸೇವೆಗೆಳನ್ನು ಜನ ಗುರುತಿಸಬೇಕಾಗಿದೆ ಎನ್ನುತ್ತಾರೆ.
0 comments:
Post a Comment