ವಿಟ್ಲ ಠಾಣಾ ವ್ಯಾಪ್ತಿಯಲ್ಲೊಂದು ನೈತಿಕ ಪೊಲೀಸ್ ಗಿರಿ : ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್
ವಿಟ್ಲ (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಬಾಲಕನೋರ್ವನನ್ನು ಇಲ್ಲಿನ ಶಾಲಾ ಅಂಗಳಕ್ಕೆ ಅಂಗಿಯ ಕಾಲರ್ ಹಿಡಿದು ಎಳೆದೊಯ್ದ ವ್ಯಕ್ತಿಯೋರ್ವ ಹಿಗ್ಗಾ ಮುಗ್ಗಾ ಥಳಿಸಿದ್ದಲ್ಲದೆ ಮನೆಗೆ ನುಗ್ಗಿ ಕೊಲೆಗೈಯುವುದಾಗಿ ಬೆದರಿಕೆ ಹಾಕುತ್ತಿರುವ ವೀಡಿಯೋ ತುಣುಕೊಂದು ಬುಧವಾರ ದಿನವಿಡೀ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹಲ್ಲೆ ನಡೆಸುತ್ತಿರುವ ವ್ಯಕ್ತಿ ಸ್ಥಳೀಯ ರೌಡಿ ಶೀಟರ್ ಕನ್ಯಾನ ಗ್ರಾಮದ ಮರ್ತನಾಡಿ ನಿವಾಸಿ ದಿನೇಶ್ ಎಂಬಾತನಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಮೂರು ಜನರ ಗುಂಪೊಂದು ಬಾಲಕನೋರ್ವನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆಗೈದು, ಬಲವಂತವಾಗಿ ಜೈಶ್ರೀರಾಂ ಎಂದು ಉಚ್ಚರಿಸುವಂತೆ ತಾಕೀತು ಮಾಡಿದ್ದಲ್ಲದೆ ಮನೆಗೆ ನುಗ್ಗಿ ಮಹಿಳೆಯರನ್ನು ಅತ್ಯಾಚಾರಗೈಯುವುದಲ್ಲದೆ ಕೊಲೆ ಮಾಡುವುದಾಗಿ ಬೆದರಿಸಿ ಬಾಲಕನ ಕಾಲರ್ ಪಟ್ಟಿ ಹಿಡಿದು ಶಾಲಾ ಮೈದಾನದ ಎಲ್ಲೆಂದರಲ್ಲಿ ಎಳೆದಾಡಿ ದೇಹದ ವಿವಿಧ ಭಾಗಗಳಿಗೆ ತೀವ್ರತರದ ಹಲ್ಲೆ ನಡೆಸುತ್ತಿರುವುದು ವೈರಲ್ ವೀಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ.
ಹಲ್ಲೆಕೋರರೇ ಘಟನೆಯ ಬಗ್ಗೆ ವೀಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟಿದ್ದಾರೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ವೀಡಿಯೋ ಬುಧವಾರ ವೈರಲ್ ಆಗಿದೆ. ವೀಡಿಯೊ ವೈರಲ್ ಆದ ಬಳಿಕ ತಾಲೂಕಿನಾದ್ಯಂತ ತೀವ್ರ ಸಂಚಲನ ಉಂಟುಮಾಡಿದೆ.
ಕೊರೋನಾ ಲಾಕ್ ಡೌನ್ ನಡುವೆ ಈ ಒಂದು ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆಯ ವೀಡಿಯೋವನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ರವಾನಿಸಿರುವ ಸಾರ್ವಜನಿಕರು ಈ ಘಟನೆಯು ಸಮಾಜದಲ್ಲಿ ಕೋಮು ಸಂಘರ್ಷದ ಭೀತಿಯನ್ನು ಸೃಷ್ಟಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕಠಿಣ ಕ್ರಮಬಜರುಗಿಸುವಂತೆ ಆಗ್ರಹಿಸಿದ್ದಾರೆ.
ಮೇ 24 ರಂದು ಗೂಡಿನಬಳಿಯಲ್ಲಿ ಆತ್ಮಹತ್ಯೆಗೆ ನದಿಗೆ ಹಾರಿದ್ದ ಹಿಂದೂ ಯುವಕ ನಿಶಾಂತ್ ಎಂಬವನ ರಕ್ಷಣೆಗೆ ಜೀವದ ಹಂಗು ತೊರೆದು ನದಿಗೆ ಧುಮುಕಿದ ಸಾಹಸಿ ವೀಡಿಯೋ ವೈರಲ್ ಆಗಿ ಮಾನವೀಯತೆಯ ಪಾಠ ಸಮಾಜಕ್ಕೆ ನೀಡಿದ್ದಲ್ಲದೆ ಸಾಹಸಿ ಯುವಕರ ಸೇವೆಗೆ ನಾಡಿನೆಲ್ಲೆಡೆ ಸನ್ಮಾನ, ಗೌರವಗಳು ನಡೆಯುತ್ತಿರುವ ಸಂದರ್ಭದಲ್ಲೇ ಈ ಕೋಮು ವೈಷಮ್ಯದ ನೈತಿಕ ಪೊಲೀಸ್ ಗಿರಿಯ ವೀಡಿಯೋ ವೈರಲ್ ಅಗುತ್ತಿರುವುದು ನಾಗರಿಕ ಸಮಾಜದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ವೀಡಿಯೋ ಬಗ್ಗೆ ವಿಟ್ಲ ಠಾಣೆಯ ಪ್ರಭಾರ ಹೊತ್ತಿರುವ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗುತ್ತಿದ್ದರೂ ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ.
0 comments:
Post a Comment