ವಿಟ್ಲ (ಕರಾವಳಿ ಟೈಮ್ಸ್) : ವಿದೇಶದಿಂದ ಬಂದಿರುವ ನಾಗರಿಕರಿಗೆ ಆಯಾ ಗ್ರಾಮಗಳಲ್ಲಿ ಕ್ವಾರಂಟೈನ್ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ವಿಟ್ಲ ಸುತ್ತಮುತ್ತಲಿನ ಜನ ಪ್ರತಿಭಟನೆಗೆ ಸಿದ್ದತೆ ನಡೆಸಿದ್ದಾರೆ.
ವಿದೇಶದಲ್ಲಿರುವ ಜಿಲ್ಲೆಯ ಜನರನ್ನು ಏರ್‍ಲಿಫ್ಟ್ ಮೂಲಕ ಕರೆತರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಬಂಟ್ವಾಳ ತಾಲೂಕಿನ 50ಕ್ಕೂ ಹೆಚ್ಚಿನ ಜನರನ್ನು ಕೊಳ್ನಾಡು, ಸಾಲೆತ್ತೂರು, ಮಂಚಿ, ಬೋಳಂತೂರು ಮತ್ತು ವಿಟ್ಲ ಪಡ್ನೂರು ಗ್ರಾಮಗಳ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ತಯಾರಿ ನಡೆದಿದೆ. ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲಾಡಳಿತದ ಸೂಚನೆಯಂತೆ ತಮ್ಮ ವ್ಯಾಪ್ತಿಯ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿವರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಳ್ನಾಡು ಗ್ರಾಮದ ಸಾಲೆತ್ತೂರು, ನಾರ್ಶ, ಸೆರ್ಕಳ, ಕುಳಾಲು, ಕಾಡುಮಠ ಮತ್ತು ಮಂಕುಡೆ ಸರಕಾರಿ ಶಾಲೆಗಳ ಹಾಗೂ ನೂಜಿಬೈಲು, ಮಾದಕಟ್ಟೆ ಅನುದಾನಿತ ಶಾಲೆಗಳ ಪಟ್ಟಿಗಳನ್ನು ಪಡೆದಿರುವ ಅಧಿಕಾರಿಗಳು ಕ್ವಾರಂಟೈನ್ ಮಾಡಲು ಸಿದ್ದತೆ ನಡೆಸಿದ್ದಾರೆ. ಎಲ್ಲಾ ಕಡೆಗಳಲ್ಲಿಯೂ ಬುಧವಾರ ಸಂಜೆಯಿಂದ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಡಕತ್ತರಿಗೆ ಸಿಲುಕಿದಂತಾಗಿದೆ. ಇಲ್ಲಿವರೆಗೆ ಲಾಕ್‍ಡೌನ್ ನಿಯಮ ಸರಿಯಾಗಿ ಪಾಲಿಸಿದ್ದ ನಮಗೆ ಇದೀಗ ವಿದೇಶದಿಂದ ಬಂದ ವ್ಯಕ್ತಿಗಳಿಗೆ ನಮ್ಮಲ್ಲಿನ ಶಾಲೆಗಳಲ್ಲಿ ಅಧಿಕಾರಿಗಳು ಕ್ವಾರಂಟೈನ್ ಮಾಡುವ ಮೂಲಕ ಅನ್ಯಾಯ ಎಸಗುತ್ತಿದ್ದಾರೆಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
0 comments:
Post a Comment