ವಿಟ್ಲ (ಕರಾವಳಿ ಟೈಮ್ಸ್) : ಕೊರೋನಾ ಸಂಕಷ್ಟದ ಲಾಕ್‍ಡೌನ್ ಅವಧಿಯು ಜನಸಾಮಾನ್ಯರನ್ನೆಲ್ಲಾ ಕಷ್ಟದ ಕೂಪಕ್ಕೆ ತಳ್ಳಿದೆ. ತಮ್ಮ ದೈನಂದಿನ ಖರ್ಚಿಗಾಗಿ ದಿನದ ದುಡಿಮೆಯಲ್ಲೇ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಇಂದು ಒಂದೊತ್ತಿನ ಊಟಕ್ಕಾಗಿ ಕೈಚಾಚುವ ಸ್ಥಿತಿ ನಿರ್ಮಾಣಗೊಂಡಿದೆ. ಇದ್ದ ಉಳಿತಾಯದ ಅಲ್ಪಸ್ವಲ್ಪ ಹಣವೂ ಈ ಸಮಯದಲ್ಲಿ ಮುಗಿದು ಹೋಗಿದೆ. ಇಂತಹ ಸಂದರ್ಭದಲ್ಲಿ ಎರಡು ತಿಂಗಳ ವಿಪರೀತ ಏರಿಕೆಗೊಂಡ ವಿದ್ಯುತ್ ಬಿಲ್ಲು ಕೂಡ ಕೈಸೇರಿದೆ. ಈ ಎರಡು ತಿಂಗಳ ದುಬಾರಿ ವಿದ್ಯುತ್ ಬಿಲ್ ಪಾವತಿಸುವ ಕುರಿತಂತೆ ಜನಸಾಮಾನ್ಯರು ಬಹಳಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ಮೀಟರ್ ರೀಡರ್‍ಗಳು ಮನೆಗೆ ಬರಲು ಸಾದ್ಯವಾಗದೆ ಹಿಂದಿನ ಬಳಕೆಯ ಸರಾಸರಿಯನ್ನು ಆಧರಿಸಿ ಎರಡು ತಿಂಗಳ ಬಿಲ್ಲು ನೀಡಲಾಗಿತ್ತು. ಆದರೆ ಬಹುತೇಕ ಜನರಿಗೆ ಹಲವು ಪಟ್ಟು ಏರಿಕೆಗೊಂಡ ದುಬಾರಿ ಬಿಲ್ ನೀಡಲಾಗಿದೆ. ಈ ವಿಪರೀತ ದರಗಳಿಗೆ ಸಂಬಂಧಿಸಿದ ಗೊಂದಲದ ಬಗೆಹರಿಸಿ, ಬಿಲ್‍ಗಳನ್ನು ಕ್ರಮಬದ್ದಗೊಳಿಸುವ ಕುರಿತು ಮೆಸ್ಕಾಂ ಅಧಿಕಾರಿಗಳು ಈವರಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಎರಡು ತಿಂಗಳ ಕಾಲ ಬಿಲ್ ಪಾವತಿಸಲು ಅವಧಿ ವಿಸ್ತರಣೆ ಮಾಡಿರುತ್ತಾರೆ. ಇದು ಏನೇನು ಸಾಲದು. ಬದಲಿಗೆ ಮಾಪಕಗಳನ್ನು ಕ್ರಮಬದ್ದಗೊಳಿಸಬೇಕು. ಲಾಕ್‍ಡೌನ್ ಅವಧಿಯ ಮೂರು ತಿಂಗಳುಗಳ ಕಾಲದ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೈಯಲ್ಲಿ ಬಿಡಿಗಾಸು ಇಲ್ಲದೆ ಜೀವನ ನಡೆಸುವುದೇ ದುಸ್ತರವಾಗಿರುವ ಸಂದರ್ಭ ಜನರಲ್ಲಿ ಬಿಲ್ಲು ಕಟ್ಟಲು ಹಣ ಬರುವುದಾದರು ಎಲ್ಲಿಂದ. ಈ ಕೋರೋನಾ ಕಷ್ಟ ಕಾಲದಲ್ಲಿ ಮೆಸ್ಕಾಂ ಸಂಸ್ಥೆ ಜನಸಾಮಾನ್ಯರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಜೀವನ ನಡೆಸುವ ಹೋರಾಟದಲ್ಲಿರುವ ಜನರ ಜೊತೆ ನಿಲ್ಲಬೇಕಾಗಿದೆ. ಮೆಸ್ಕಾಂ ಈವರೆಗೆ ಜಿಲ್ಲೆಯಲ್ಲಿ ಲಾಭದಾಯಕವಾಗಿ ಮುನ್ನಡೆದಿದೆ. ವಿದ್ಯುತ್ ಅನ್ನೋದು ಸೇವಾಕ್ಷೇತ್ರ. ಈ ಸಂದರ್ಭದಲ್ಲಾದರೂ ಮೆಸ್ಕಾಂ ಸೇವಾ ಮನೋಭಾವನೆಯಿಂದ ವರ್ತಿಸಬೇಕಾಗಿದೆ.
ಈ ಹಿನ್ನಲೆಯಲ್ಲಿ ಮೆಸ್ಕಾಂ ಸಂಸ್ಥೆಯು ಜನಸಾಮಾನ್ಯರ 3 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಹಾಗೂ ಆರು ತಿಂಗಳವರೆಗೆ ಬಿಲ್ಲು ಪಾವತಿಸಲು ಬಲವಂತಪಡಿಸದೆ, ಸಮಯಾವಕಾಶ ನೀಡಬೇಕು ಎಂದು ಡಿವೈಎಫ್‍ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರ ಮುಖಾಂತರ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಅಧ್ಯಕ್ಷ ನುಜುಂ ಅಳಿಕೆ, ಕಾರ್ಯದರ್ಶಿ ಜಮೀಲ್ ಎಂ., ಸಲಹೆಗಾರರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ವಿಟ್ಲ ವಲಯ ಸಮಿತಿ ಮುಖಂಡರಾದ ಇರ್ಪಾನ್ ಒಕ್ಕೆತ್ತೂರು, ಆರೀಫ್ ಬಿ.ಕೆ., ಸಲೀಂ ಮಲಿಕ್, ನೌಷಾದ್ ಪಾತ್ರತೋಟ, ಖಲೀಲ್ ಮೊದಲಾದವರು ಇದ್ದರು.
0 comments:
Post a Comment