ನಾಳೆಯಿಂದ ಡಬಲ್ ಶರ್ಟ್‍ಗೆ 500 ರೂಪಾಯಿ ದಂಡದ ಎಚ್ಚರಿಕೆ
ಉಡುಪಿ (ಕರಾವಳಿ ಟೈಮ್ಸ್) : ಮೋಟಾರು ವಾಹನ ಕಾಯ್ದೆ ಪ್ರಕಾರ ಅಟೋ ಚಾಲಕರು ಕೇವಲ ಒಂದು ಖಾಕಿ ಶರ್ಟ್ ಮಾತ್ರ ಧರಿಸಬೇಕು. ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಉಡುಪಿ ಪೊಲೀಸರು ಡಬ್ಬಲ್ ಶರ್ಟ್ ಹಾಕಿ ಅಟೋ ಓಡಿಸುವ ಚಾಲಕರ ಬೆನ್ನು ಬಿದ್ದಿದ್ದಾರೆ. ನಗರದ ಪ್ರಮುಖ ಜಂಕ್ಷನ್‍ಗಳಲ್ಲಿ ಪೊಲೀಸರು ಡಬ್ಬಲ್ ಶರ್ಟ್ ಹಾಕುವ ಆಟೋ ಡ್ರೈವರ್‍ಗಳಿಗೆ ಶರ್ಟ್ ಬಟನ್ ಹಾಕಿಸುವ ಮೂಲಕ ಪಾಠ ಮಾಡುತ್ತಿದ್ದಾರೆ.
ನಗರಾದ್ಯಂತ ಆಟೋ ಚಾಲಕರು ಒಳಗೊಂದು ಶರ್ಟ್ ಹಾಕಿ, ಹೊರಗೆ ಖಾಕಿ ಶರ್ಟ್ ಹಾಕಿ ಅದನ್ನು ಓಪನ್ ಬಿಟ್ಟುಕೊಳ್ಳುವುದು ವಾಡಿಕೆಯಾಗಿ ಹೋಗಿದೆ. ಫುಲ್ ಹ್ಯಾಂಡ್ ಶರ್ಟ್ ಮೇಲೆ ಹಾಫ್ ಖಾಕಿ ಶರ್ಟ್ ಹಾಕಿಕೊಂಡು ಅದನ್ನು ಓಪನ್ ಬಿಟ್ಟುಕೊಂಡು ಆಟೋ ಡ್ರೈವರ್‍ಗಳು ಆಟೋ ಚಾಲನೆ ಮಾಡುತ್ತಿದ್ದಾರೆ. ಇದೀಗ ಇಂತಹ ಡಬ್ಬಲ್ ಶರ್ಟ್ ಹಾಕಿಕೊಂಡು ಬಾಡಿಗೆ ಮಾಡುವ ಆಟೋ ಡ್ರೈವರ್‍ಗಳನ್ನು ಉಡುಪಿ ಪೊಲೀಸರು ಬೆನ್ನು ಬಿದ್ದು ಕಾನೂನಿನ ಪಾಠ ಕಲಿಸಲು ಮುಂದಾಗಿದ್ದಾರೆ.
ನಗರದಲ್ಲಿ ಡಬ್ಬಲ್ ಶರ್ಟ್ ಹಾಕಿಕೊಂಡು ಮೋಟಾರು ಕಾಯ್ದೆ ಉಲ್ಲಂಘಿಸುವವರನ್ನು ಟ್ರಾಫಿಕ್ ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ಸದ್ಯ ರಿಕ್ಷಾದಿಂದ ಇಳಿಸಿ ಬಟನ್ ಹಾಕಿಸಿ ಪೊಲೀಸರು ಪಾಠ ಹೇಳಿ ಕಳುಹಿಸುತ್ತಿದ್ದಾರೆ. ಉಡುಪಿಯ ಅಂಬಲಪಾಡಿ ಜಂಕ್ಷನ್, ಕಲ್ಸಂಕ ಜಂಕ್ಷನ್, ಮಣಿಪಾಲ ಡಯಾನ ಸರ್ಕಲ್, ಸಿಟಿ ಬಸ್ ನಿಲ್ದಾಣ ಸೇರಿದಂತೆ ಜನ ಹೆಚ್ಚು ಓಡಾಡುವ ಆಟೋ ನಿಲ್ದಾಣಗಳು ಇರುವಲ್ಲೇ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ರೌಡಿಗಳು ಡಬ್ಬಲ್ ಶರ್ಟ್ ಹಾಕಿ ಓಡಾಡುತ್ತಾರೆ. ಭಿಕ್ಷುಕರು ಎರಡು ಮೂರು ಶರ್ಟ್ ಹಾಕಿ ಓಡಾಡುತ್ತಾರೆ. ಆಟೋ ಚಾಲಕರಿಗೆ ಗೌರವ ಇದೆ. ನೀವು ಜನಸೇವೆ ಮಾಡುವವರು. ನೀವು ಶಿಸ್ತಿನಿಂದ ಇದ್ದು ಗ್ರಾಹಕರಿಗೆ ಉತ್ತಮ ಸೇವೆ ಕೊಡಿ ಎಂದು ಎಸ್ಸೈ ಅಬ್ದುಲ್ ಖಾದರ್ ಅಟೋ ಚಾಲಕರಿಗೆ ಪಾಠ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸ್‍ಐ ಅಬ್ದುಲ್ ಖಾದರ್, ಮೇಲ್ನೋಟಕ್ಕೆ ಕಾಣುವ ಕಾನೂನು ಉಲ್ಲಂಘನೆಗೆ ದಂಡ ಹಾಕುತ್ತಿದ್ದೇವೆ. ಹೆಲ್ಮೆಟ್, ಸೀಟ್ ಬೆಲ್ಟ್‍ಗಳನ್ನು ಹಾಕದವರಿಗೆ ಫೈನ್ ಹಾಕಿದ್ದೇವೆ. ಬುಧವಾರದಿಂದ ಡಬ್ಬಲ್ ಶರ್ಟ್ ಹಾಕುವವರಿಗೆ 500 ರೂಪಾಯಿ ದಂಡ ಹಾಕುತ್ತೇವೆ ಎಂದಿದ್ದಾರೆ.
0 comments:
Post a Comment