ವಾರಣಾಸಿ (ಕರಾವಳಿ ಟೈಮ್ಸ್) : ಯುವ ಸಮೂಹದ ಟಿಕ್ ಟಾಕ್ ವ್ಯಾಮೋಹ ಜೀವವನ್ನೇ ಬಲಿ ತೆಗೆಯುತ್ತಿರುವ ಹಲವು ದುರಂತಗಳು ನಡೆದು ಹೋಗಿದೆ. ಇದೀಗ ಇದೇ ಸಾಲಿಗೆ ಇನ್ನೊಂದು ಸೇರ್ಪಡೆಗೊಂಡಿದೆ. ನದಿ ನೀರಿನಲ್ಲಿ ಸ್ನಾನ ಮಾಡುತ್ತಾ ಟಿಕ್ ಟಾಕ್ ವೀಡಿಯೋ ಮಾಡುತ್ತಿದ್ದ ಐದು ಮಂದಿ ಬಾಲಕರು ಆಯ ತಪ್ಪಿ ನದಿ ನೀರಿನಲ್ಲಿ ಮುಳುಗಿ ದುರಂತ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ತೌಸಿಫ್ (19), ಫರ್ದೀನ್ (14), ಸೈಫ್ (15), ರಿಜ್ವಾನ್ (15), ಮತ್ತು ಸಾಕಿ (14) ಎಂಬವರೇ ಮೃತಪಟ್ಟ ಎಳೆ ಬಾಲಕರು. ವಾರಣಾಸಿಯ ಗಂಗಾನದಿಯಲ್ಲಿ ಈ ಐದು ಮಂದಿ ಬಾಲಕರು ಟಿಕ್ ಟಾಕ್ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಒಳಗಾಗಿ ಮುಳುಗಿ ಸಾವನ್ನಪ್ಪಿದ್ದಾರೆ. ಬಾಲಕರು ನೀರಿನಲ್ಲಿ ಟಿಕ್ ಟಾಕ್ ಮಾಡುತ್ತಿದ್ದ ವೇಳೆ ಓರ್ವ ಬಾಲಕ ಕಾಲು ಜಾರಿ ನೀರಿಗೆ ಬಿದ್ದಿದ್ದು, ಸೆಳೆತಕ್ಕೆ ಸಿಲುಕಿದ್ದಾನೆ. ಈ ಸಂದರ್ಭ ಆತನನ್ನು ರಕ್ಷಿಸುವ ಭರದಲ್ಲಿ ಇತರ ಎಲ್ಲ ನಾಲ್ಕು ಮಂದಿ ಬಾಲಕರೂ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾ ಎಸ್ಪಿ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಜಯ್ ತ್ರಿಪಾಠಿ ಅವರು, ಬಾಲಕರು ನೀರಿನಲ್ಲಿ ಈಜಲು ಹೋಗಿ ಮುಳುಗಿದ್ದಾರೆ. ಪ್ರಸ್ತುತ ಈಜು ತಜ್ಞರಿಂದ ಬಾಲಕರ ದೇಹಗಳನ್ನು ಮೇಲೆ ತರಲಾಗಿದ್ದು, ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದಿದ್ದಾರೆ.
ಘಟನೆ ಬಗ್ಗೆ ತೀವ್ರ ಅಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸಂತ್ರಸ್ಥ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
0 comments:
Post a Comment