ಬೆಂಗಳೂರು (ಕರಾವಳಿ ಟೈಮ್ಸ್) : ಭಾನುವಾರದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ರಾಜ್ಯ ಸರಕಾರ ವಾಪಸ್ ಪಡೆದಿದೆ. ಎಂದಿನಂತೆ ಭಾನುವಾರ ಕೂಡಾ ಬೆಳಿಗ್ಗೆ 7 ರಿಂದ ರಾತ್ರಿ 7 ಗಂಟೆವರೆಗೆ ಎಲ್ಲಾ ರೀತಿಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕಛೇರಿ ಪ್ರಕಟಣೆ ತಿಳಿಸಿದೆ.
ಮೇ 18 ರಂದು ನಾಲ್ಕನೇ ಹಂತದ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರು. ಅದರಂತೆ ಕಳೆದ ಭಾನುವಾರ ಅಗತ್ಯ ವಸ್ತುಗಳು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳು ರದ್ದಾಗಿತ್ತು.
ಸಾರ್ವಜನಿಕರ ಕೋರಿಕೆ ಮೇರೆಗೆ ಭಾನುವಾರದ ಸಂಪೂರ್ಣ ಲಾಕ್ ಡೌನ್ ಆದೇಶ ಮಾರ್ಪಡಿಸಲಾಗಿದೆ. ಆದರೆ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ ಯಥಾ ಪ್ರಕಾರ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಟಿ.ಎಂ.ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ರಾತ್ರಿ 7 ಗಂಟೆ ನಂತರ ಅವಶ್ಯಕವಲ್ಲದ ಚಟುವಟಿಕೆಗಳ, ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಈ ಸಂಬಂಧ ಸ್ಥಳೀಯ ಪ್ರಾಧಿಕಾರಗಳಿಂದ ಪ್ರತ್ಯೇಕ ಆದೇಶ ಹೊರಡಿಸಬೇಕು. ಸಂಬಂಧಪಟ್ಟ ಜಿಲ್ಲಾಡಳಿಗಳು ಕಟ್ಟುನಿಟ್ಟಾಗಿ ಈ ಆದೇಶ ಜಾರಿಗೆ ತರಬೇಕು ಎಂದು ಸೂಚಿಸಿದೆ.
ನಾಳೆ ಕೂಡ ಎಂದಿನಂತೆ ಆಟೋ, ಉಬರ್ ಸೇವೆ ಇರುತ್ತದೆ. ಸಾರ್ವಜನಿಕ ಸಾರಿಗೆ ಸಂಪರ್ಕ ವ್ಯವಸ್ಥೆಯಿರುತ್ತದೆ. ಮದ್ಯದಂಗಡಿ, ಮಾಂಸದಂಗಡಿಗಳು ತೆರೆದಿರುತ್ತವೆ. ಬ್ಯೂಟಿಪಾರ್ಲರ್, ಸೆಲೂನ್ ತೆರೆದಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
0 comments:
Post a Comment