ಬೆಂಗಳೂರು (ಕರಾವಳಿ ಟೈಮ್ಸ್) : ವಿರೋಧ ಪಕ್ಷಗಳ ವಿರೋಧದ ನಡುವೆಯೂ ರಾಜ್ಯ ಸರಕಾರ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿ ನಾಮನಿರ್ದೇಶನ ಸದಸ್ಯರ ನೇಮಕಕ್ಕೆ ಮುಂದಾಗಿರುವುದರ ವಿರುದ್ಧ ಕಾಂಗ್ರೆಸ್ ಗ್ರಾಮಪಂಚಾಯತ್ ಮಟ್ಟದಲ್ಲಿ ಹೋರಾಟ ನಡೆಸಲು ಸಿದ್ದತೆ ನಡೆಸಿದೆ. ಅಲ್ಲದೆ ಸರಕಾರದ ನಿಯಮಬಾಹಿರ ಕ್ರಮ ವಿರೋಧಿಸಿ ಕಾನೂನು ಹೋರಾಟ ಮಾಡುವುದಾಗಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯನ್ನು ಆಯೋಗ ಮುಂದೂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ತಮಗೆ ಸರಕಾರ ಚುನಾವಣೆ ಮುಂದೂಡುವ ಮಾಡುವ ಬಗ್ಗೆ ಮೊದಲೇ ಅನುಮಾನ ಇತ್ತು. ಇದಕ್ಕಾಗಿಯೇ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ನಿಗದಿತ ಸಮಯಕ್ಕೆ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದೆವು. ಈಗ ನಮ್ಮ ಅನುಮಾನ ನಿಜವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಚುನಾವಣೆ ಎದುರಿಸಲಾಗದ ಪುಕ್ಕಲು ಸರಕಾರ ನಾಮನಿರ್ದೇಶನದ ಸದಸ್ಯರ ಮೂಲಕ ಅಡ್ಡಮಾರ್ಗದಲ್ಲಿ ಗ್ರಾಮಪಂಚಾಯತ್ ಮೇಲೆ ಸ್ವಾಮ್ಯ ಸ್ಥಾಪಿಸಲು ಹೊರಟಿರುವುದು ನಾಚಿಕೆಗೇಡು ಎಂದವರು ಕಟುವಾಗಿ ಟೀಕಿಸಿದ್ದಾರೆ.
ಸರಕಾರದ ಈ ಕ್ರಮವನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಲಾಗುವುದು. ಕರ್ನಾಟಕ ಪಂಚಾಯತ್ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಗ್ರಾಮ ಪಂಚಾಯತ್‍ಗಳಿಗೆ ಚುನಾವಣೆ ನಡೆಸದೆ ಆಡಳಿತ ಸಮಿತಿ ರಚಿಸುವಂತಿಲ್ಲ. ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡುವ ಮೂಲಕ ರಾಜ್ಯ ಚುನಾವಣಾ ಆಯೋಗ ಆಡಾಳಿತರೂಢ ಪಕ್ಷ ಬಿಜೆಪಿ ಹಾಕಿದ ತಾಳಕ್ಕೆ ತಕ್ಕ ಹಾಗೆ ಕುಣಿದಿದೆ ಎಂದಿರುವ ಅವರು, ಗ್ರಾಮ ಪಂಚಾಯತ್‍ಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಮುಂದೂಡಿರುವುದು ಕರ್ನಾಟಕ ಪಂಚಾಯತ್‍ರಾಜ್ ಕಾಯ್ದೆ 1993ಕ್ಕೆ ಬಗೆದ ಅಪಚಾರ. ಈ ಪ್ರಜಾಪ್ರಭುತ್ವ ವಿರೋಧಿ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
0 comments:
Post a Comment