ಜನ ಕ್ಯೂನಲ್ಲಿ ನಿಂತಲ್ಲಿಯೇ ಬಾಕಿ, ಬ್ರೋಕರ್ ಗಳ ಫೈಲುಗಳು ಕಿಟಕಿ ನುಗ್ಗುತ್ತಿವೆ : ಆರೋಪ
ಶಿವಮೊಗ್ಗ (ಕರಾವಳಿ ಟೈಮ್ಸ್) : ಆರ್.ಟಿ.ಒ. ಕಛೇರಿ ಎಂದಾಕ್ಷಣ ತಕ್ಷಣ ಜನರ ಮನಸ್ಸಿಗೆ ಬರುವುದೇ ಬ್ರೋಕರ್‍ಗಳು. ಅಂದರೆ ಆರ್.ಟಿ.ಒ. ಕಛೇರಿಗೆ ಜನಸಾಮಾನ್ಯರು ನೇರವಾಗಿ ಎಡತಾಕುವಂತೆಯೇ ಇಲ್ಲ. ಬ್ರೋಕರ್ ಮೂಲಕ ಇಲ್ಲದೆ ಇದ್ದರೆ ಅಲ್ಲಿ ಯಾವುದೇ ಕೆಲಸ-ಕಾರ್ಯಗಳೇ ನಡೆಯುವುದಿಲ್ಲ ಎಂಬ ಅಲಿಖಿತ ನಿಯಮ ಜಾರಿಯಲ್ಲಿದ್ದು, ಜನ ನೇರವಾಗಿ ಕಛೇರಿಗೆ ಧಾವಿಸಿದರೆ ಇಲ್ಲಿನ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ಕ್ಯಾರೇ ಅನ್ನುವುದಿಲ್ಲ. ಇದರಿಂದ ಬೇಸತ್ತು ಹೋಗಿರುವ ಸಾರ್ವಜನಿಕರು ಕೊನೆಗೂ ಸಾಯಲಿ ಬಿಡಿ ಎಂದು ತಮ್ಮ ಕೆಲಸ-ಕಾರ್ಯ ನಡೆಯಲಿ ಎಂಬ ಉದ್ದೇಶದಿಂದ ಬ್ರೋಕರ್‍ಗಳ ಕೈಯಲ್ಲಿ ತಮ್ಮ ಕಡತ ಒಪ್ಪಿಸಿ ಬಿಡುತ್ತಾರೆ.
ಇದಕ್ಕೆ ಶಿವಮೊಗ್ಗ ಆರ್.ಟಿ.ಒ. ಕಛೇರಿ ಸ್ಪಷ್ಟ ಉದಾಹರಣೆ. ಇಲ್ಲಿನ ಸಾರಿಗೆ ಅಧಿಕಾರಿ ಕಛೇರಿಯಲ್ಲಿ ಜನ ತಮ್ಮ ಅಗತ್ಯ ಕೆಲಸ-ಕಾರ್ಯಗಳಿಗಾಗಿ ಬೆಳ್ಳಂ ಬೆಳಗ್ಗೆ ಬಂದು ನೂಕು ನುಗ್ಗಲಿನಲ್ಲಿ ಕೌಂಟರ್‍ಗಳಲ್ಲಿ ಸರತಿಯಲ್ಲಿ ನಿಂತು ಕಾಯುತ್ತಿದ್ದರೂ, ಬ್ರೋಕರ್‍ಗಳ ಫೈಲ್‍ಗಳು ಮಾತ್ರ ಕಿಟಕಿಯ ಒಳಭಾಗದಲ್ಲಿ ನುಗ್ಗಿ ಟೇಬಲ್ ಮೇಲೆ ಬಿದ್ದಾಗುತ್ತದೆ. ಆಶ್ಚರ್ಯ ಆದರೂ ಇದು ಸತ್ಯ! ಇಲ್ಲಿ ನಿತ್ಯವೂ ಕಂಡು ಬರುತ್ತಿರುವ ನೈಜ ಘಟನೆ ಇದು.
ಇಲ್ಲಿನ ಸಾರಿಗೆ ಇಲಾಖೆಯ ಗುಮಾಸ್ತರಿಂದ ಹಿಡಿದು ಹಿರಿಯ ಅಧಿಕಾರಿಗಳವೆರೆಗೂ ಬ್ರೋಕರ್‍ಗಳ ಸಂಬಂಧ ಅಷ್ಟೊಂದು ಸುಮಧುರವಾಗಿದೆ ಎನ್ನುತ್ತಾರೆ ಜನ. ಯಾರು ಏನು ಮಾಡಿದರೂ ಇಲ್ಲಿನ ಸಾರಿಗೆ ಅಧಿಕಾರಿಗಳ ಹಾಗೂ ಬ್ರೋಕರುಗಳ ನಡುವಿನ ಸುಮಧುರ ಬಾಂಧವ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಇದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಶನಿವಾರ ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ನೂರಿನ್ನೂರು ಜನ ಕಛೇರಿಯೆದುರು ಲೈಸೆನ್ಸ್, ತೆರಿಗೆ ಕಟ್ಟಲು, ಹೊಸ ವಾಹನ ನೋಂದಣಿ, ದಾಖಲಾತಿ ಇತ್ಯಾದಿಗಳಿಗಾಗಿ ಸಾಲಾಗಿ ನಿಂತಿದ್ದರೂ, ಕೋವಿಡ್-19 ಕಾರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡಲು ನಗದು ಕೌಂಟರ್ ಎದುರು ಜನ ನಿಲ್ಲಲು ಗುರುತು ಹಾಕಿದ ಜಾಗದಲ್ಲಿ ಜನರ ಬದಲು ಹೆಲ್ಮೆಟ್, ಚೀಲಗಳನ್ನು ಇಟ್ಟು ಸ್ಥಳ ಕಾಯ್ದಿರಿಸಲಾಗಿದೆ. ಸಮಯ ಸುಮಾರು 10.45 ಕಳೆದರೂ ಕಛೇರಿಯ ಬಾಗಿಲು ತೆಗೆದೆ ಸಿಬ್ಬಂದಿ ಕೆಲಸ ಪ್ರಾರಂಭಿಸಿಲ್ಲ. ಅಷ್ಟರಲ್ಲಿ ನಗದು ಕೌಂಟರ್‍ನಲ್ಲಿ ಇಲ್ಲಿನ ಶಿವಾಲಯ ದೇವಸ್ಥಾನಗಳ ಎದುರು ಭಾಗದಲ್ಲಿರುವ ಡ್ರೈವಿಂಗ್ ಸ್ಕೂಲ್‍ವೊಂದರ ಹತ್ತಾರು ಫೈಲುಗಳನ್ನು ರಾಶಿ ತಂದು ಇಟ್ಟು ಅದನ್ನು ಕಾಯಲು ಒಬ್ಬರು ನಿಂತಿರುವ ದೃಶ್ಯ ಕಂಡು ಬಂತು.
ನಗದು ಶಾಖೆ ಗುಮಾಸ್ತ ಇನ್ನು ಬಂದಿಲ್ಲ, ಕೌಂಟರ್ ಬಾಗಿಲು ತೆರೆಯಲಿಲ್ಲ. ಅಷ್ಟರಲ್ಲಿ ಹತ್ತಾರು ಫೈಲ್‍ಗಳು ಅದೇಗೆ ಕಛೇರಿ ಕೌಂಟರ್ ಒಳಭಾಗಕ್ಕೆ ಸೇರಿಕೊಂಡವು ಎಂಬುದೇ ಚಿದಂಬರ ರಹಸ್ಯವಾಗಿ ಸಾರ್ವಜನಿಕರನ್ನು ಕಾಡತೊಡಗಿತು. ಈ ಬಗ್ಗೆ ಇಲ್ಲಿನ ಸಾರಿಗೆ ಕಛೇರಿಯ ಅಧಿಕಾರಿಗಳೇ ಜನರಿಗೆ ಉತ್ತರ ನೀಡಬೇಕಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಲಿಯೋ ಅರೋಜ.
ಒಟ್ಟಿನಲ್ಲಿ ಆರ್.ಟಿ.ಒ. ಕಛೇರಿಗೂ, ಬ್ರೋಕರ್‍ಗಳಿಗೂ ಇರುವ ಸಂಬಂಧ ಕಳೆದುಹೋದರೆ ಸಾರಿಗೆ ಇಲಾಖೆಯ ಕಛೇರಿಯಲ್ಲಿ ಕೆಲಸ-ಕಾರ್ಯಗಳೇ ನಡೆಯಲಾರದು ಎಂಬ ಸ್ಥಿತಿ ಶಿವಮೊಗ್ಗ ಆರ್.ಟಿ.ಒ. ಕಛೇರಿಯಲ್ಲಿ ಕಂಡು ಬರುತ್ತಿದೆ ಎಂಬ ಆರೋಪ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.
0 comments:
Post a Comment