ಗೌರವ-ಸನ್ಮಾನಗಳಿಗಿಂತಲೂ ಜೀವ ರಕ್ಷಣೆಗೆ ಸರಕಾರ ಪೂರಕ ಅವಕಾಶ ಒದಗಿಸಿಕೊಟ್ಟಲ್ಲಿ ನಾವು ಪೂರ್ಣ ಸಂತೃಪ್ತರಾಗುತ್ತೇವೆ : ಮುಹಮ್ಮದ್ ಮಮ್ಮು
ಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಮುಳುಗುತ್ತಿದ್ದ ನಿಶಾಂತ್ ಎಂಬ ಹುಡುಗನ ಜೀವ ರಕ್ಷಣೆಗೆ ಗೂಡಿನಬಳಿ ಪ್ರದೇಶದ ಈಜುಪಟು ಯುವಕರು ಪ್ರಯತ್ನಿಸಿದ ಸಾಹಸಿ ಘಟನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ವತಿಯಿಂದ ‘ಸಂಜೀವಿನಿ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ಬುಧವಾರ ಪಾಣೆಮಂಗಳೂರು ಸಮೀಪದ ಬೋಳಂಗಡಿಯ ಉಮ್ಮುಲ್ ಕುರಾ ತಹ್‍ಫೀಝುಲ್ ಕುರ್‍ಆನ್ ಮದ್ರಸ ಸಭಾಂಗಣದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಾಹಸಿ ಯುವಕರಾದ ಮುಹಮ್ಮದ್, ಶಮೀರ್, ತೌಸೀಫ್, ಝಾಹಿದ್, ಮುಖ್ತಾರ್ ಹಾಗೂ ಆರಿಫ್ ಅವರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಇದೇ ವೇಳೆ ಸನ್ಮಾನಿತರ ಪರವಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಮುಹಮ್ಮದ್ ಮಮ್ಮು ಅವರು ಕಳೆದ ಹಲವು ವರ್ಷಗಳಿಂದ ಗೂಡಿನಬಳಿ ಸಹಿತ ಜಿಲ್ಲೆಯ ವಿವಿಧೆಡೆ ಇಂತಹ ಹಲವು ಅನಾಹುತ ಸಂದರ್ಭ ನಾವುಗಳು ನಮ್ಮ ಕೈಯಲ್ಲಾಗುವ ಸೇವೆಗಳನ್ನು ನೀಡುತ್ತಾ ಬಂದಿದ್ದು, ಇದುವರೆಗೂ ನಮಗೆ ಸರಕಾರ, ಜಿಲ್ಲಾಡಳಿತ ಅಥವಾ ತಾಲೂಕಾಡಳಿತ ಯಾವುದೇ ಪೂರಕ ಪರಿಕರಗಳನ್ನಾಗಲೀ, ಇನ್ನೊಬ್ಬರ ರಕ್ಷಣೆಗೆ ಜೀವದ ಹಂಗು ತೊರೆದು ಧಾವಿಸುವ ನಮ್ಮ ರಕ್ಷಣೆಗೆ ಬೇಕಾದ ಯಾವುದೇ ವ್ಯವಸ್ಥೆಗಳನ್ನೂ ಸರಕಾರಗಳಿಂದ ಒದಗಿಸಲಾಗುತ್ತಿಲ್ಲ ಎಂಬುದೇ ಅತ್ಯಂತ ನೋವಿನ ವಿಚಾರ ಎಂದರು. ಇಂತಹ ಅಪಾಯಕಾರಿ ಸಂದರ್ಭದಲ್ಲೂ ಏನಾದರೂ ಮಾನವೀಯ ಜೀವ ರಕ್ಷಣೆಯ ಕಾರ್ಯ ಮಾಡಿದಾಗ ಇದೇ ರೀತಿ ಕೆಲವೊಂದು ಸಂಘ-ಸಂಸ್ಥೆಗಳು ಮಾಡುವ ಸನ್ಮಾನ-ಗೌರವಗಳು ಬಿಟ್ಟರೆ ಮಾಡಬೇಕಾದ ಸರಕಾರಗಳು, ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದ ಮುಹಮ್ಮದ್ ನಮಗೆ ಗೌರವ-ಸನ್ಮಾನಗಳು ಮುಖ್ಯವಲ್ಲ, ಜನರ ರಕ್ಷಣೆಗೆ ಬೇಕಾದ ಏನಾದರೂ ಮೂಲಭೂತ ಸೌಲಭ್ಯಗಳನ್ನು ಸರಕಾರ ಒದಗಿಸಿಕೊಟ್ಟು ಆ ಮೂಲಕ ಜೀವ ಕಾರುಣ್ಯ ಸೇವೆಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಟ್ಟರೆ ಅದರಿಂದ ನಾವುಗಳು ಇನ್ನಷ್ಟು ಸಂತೃಪ್ತರಾಗುತ್ತೇವೆ ಎಂದರು.
ಈ ಸಂದರ್ಭ ಪಕ್ಷ ಪ್ರಮುಖರಾದ ಮೊಯಿನ್ ಕಮರ್, ಶ್ರೀಕಾಂತ್ ಸಾಲ್ಯಾನ್, ದಿವಾಕರ ಬೋಳೂರು, ಎಸ್ ಎಂ ಮುತಾಲಿಬ್, ತಫ್ಲೀಲ್ ಯು, ಸಲೀಂ ಬೋಳಂಗಡಿ, ಸತ್ತಾರ್ ಗೂಡಿನಬಳಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment