ಮಂಗಳೂರು (ಕರಾವಳಿ ಟೈಮ್ಸ್) : ರಾಜ್ಯದ ವಿವಿಧ ಪ್ರದೇಶಗಳಲ್ಲಿ ಲಾಕ್‍ಡೌನ್ ಕಾರಣದಿಂದ ಅನಿವಾರ್ಯವಾಗಿ ಬಾಕಿಯಾಗಿರುವ ಮಂದಿಗಳು ಇದೀಗ ಊರಿಗೆ ಮರಳುತ್ತಿದ್ದು, ಅವರಿಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡುಲಾಗುತ್ತಿದೆ. ಈ ಬಗ್ಗೆ ಯಾರಾದರೂ ವಿರೋಧ, ಪ್ರತಿಭಟನೆ ಕೈಗೊಂಡಲ್ಲಿ ಸಾಂಕ್ರಾಮಿಕ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಎಚ್ಚರಿಸಿದ್ದಾರೆ.
ಲಾಕ್‍ಡೌನ್ ಹಿನ್ನಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಹಾಗೂ ಊರುಗಳಲ್ಲಿ ಬಾಕಿಯಾಗಿರುವ ಮಂದಿಗಳು ಇದೀಗ ಸರಕಾರದ ನಿಯಮಾವಳಿಯಂತೆ ಊರಿಗೆ ಬರುತ್ತಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಈ ರೀತಿ ವಾಪಾಸು ಬರುತ್ತಿರುವವರಿಗೆ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆ ಅಥವಾ ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿ ಕ್ವಾರಂಟೈನ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವುದಾಗಿರುತ್ತದೆ.
ಊರಿಗೆ ಮರಳುತ್ತಿರುವವರು ನಮ್ಮೂರಿನವರೇ ಆಗಿದ್ದು, ಎಲ್ಲರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಅವರನ್ನು ಪ್ರತ್ಯೇಕ ಕ್ವಾರಂಟೈನ್‍ಗೆ ಸೂಚಿಸಿದೆ. ಅವರನ್ನು ಕರೆ ತರುವ ಸಂದರ್ಭ ಆರೋಗ್ಯ ತಪಾಸಣೆಯನ್ನೂ ಮಾಡಲಾಗಿರುತ್ತದೆ.
ಈ ಎಲ್ಲಾ ಪ್ರಕ್ರಿಯೆಗಳಿಗೆ ಸ್ಥಳೀಯ ಗ್ರಾ.ಪಂ. ಟಾಸ್ಕ್‍ಫೋರ್ಸ್ ಸಮಿತಿ ಸಂಪೂರ್ಣ ಸಹಕಾರ ನೀಡಿರುತ್ತದೆ. ಸಮಾಜದ ಹಿತದೃಷ್ಟಿಯಿಂದ ನಿಗಾ ಇಡುವ ಉದ್ದೇಶದಿಂದ ಮಾತ್ರ ಕ್ವಾರಂಟೈನ್ ಮಾಡಲಾಗುತ್ತಿದೆ. ಯಾರೂ ಈ ಬಗ್ಗೆ ಅನಾವಶ್ಯಕ ಭಯಪಡುವ ಅಗತ್ಯವಿಲ್ಲ. ಇಷ್ಟಾಗಿಯೂ ಜಿಲ್ಲಾಡಳಿತದ ಆದೇಶದ ಬಗ್ಗೆ ಪ್ರತಿರೋಧ ತೋರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment