ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಗ್ರಾಮದ ಸೀಲ್‍ಡೌನ್‍ಗೆ ಒಳಪಟ್ಟು ಸಂಕಷ್ಟದ ಬದುಕು ಅನುಭವಿಸುತ್ತಿರುವ ನಾಯಿಲ ಪ್ರದೇಶದ ನಿವಾಸಿಗಳಿಗೆ ಮನೆ ತೆರಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ ಮೊದಲಾದ ಪಾವತಿಗಳಿಂದ ವಿನಾಯಿತಿ ನೀಡುವಂತೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಪ್ರಮುಖರ ನಿಯೋಗದೊಂದಿಗೆ ಬಂಟ್ವಾಳ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರನ್ನು ಭೇಟಿಯಾದ ಸುದೀಪ್ ಕುಮಾರ್ ಲಿಖಿತ ಮನವಿ ಮಾಡಿದ್ದು, ನಾಯಿಲ ಪ್ರದೇಶದಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸೀಲ್‍ಡೌನ್ ಘೋಷಿಸಿರುವುದರಿಂದ ಇಲ್ಲಿನ ಸುಮಾರು 120 ಮನೆಗಳ ಜನರು ಯಾವುದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದರಿಂದ ಇಲ್ಲಿನ ಜನ ನಿತ್ಯದ ಬದುಕು ನಿರ್ವಹಣೆಯಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಂತ್ರಸ್ತರೊಂದಿಗೆ ಸ್ಪಂದಿಸುವ ಸಲುವಾಗಿ ಮನೆ ತೆರಿಗೆ, ನೀರಿನ ಬಿಲ್, ವಿದ್ಯುತ್ ಬಿಲ್ ಮೊದಲಾದ ಪಾವತಿಗಳನ್ನು ಮನ್ನಾ ಮಾಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ನಿಯೋಗದಲ್ಲಿ ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ನರಿಕೊಂಬು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಧವ ಕರ್ಬೆಟ್ಟು, ಪಂಚಾಯತ್ ಸದಸ್ಯರಾದ ರವೀಂದ್ರ ಸಪಲ್ಯ, ಕೃಷ್ಣಪ್ಪ ನಾಟಿ, ಅರುಣ್ ಶೆಟ್ಟಿ, ಸ್ಥಳೀಯ ನಿವಾಸಿ ಆಲ್ಬರ್ಟ್ ಮೆನೇಜಸ್ ಮೊದಲಾದವರು ಇದ್ದರು.
0 comments:
Post a Comment