ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶ
ಬೆಂಗಳೂರು (ಕರಾವಳಿ ಟೈಮ್ಸ್) : ಹಾಸ್ಟೆಲ್‍ಗಳಲ್ಲಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಬಾಕಿ ಉಳಿದಿರುವ ಇಂಗ್ಲೀಷ್ ಪತ್ರಿಕೆಯ ಪರೀಕ್ಷೆಯನ್ನು ತಮ್ಮ ತವರು ಜಿಲ್ಲೆಗಳಲ್ಲಿಯೇ ಬರೆಯಲು ಪದವಿಪೂರ್ವ ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಡುತ್ತಿದೆ.
ಈ ಅವಕಾಶ ಕೇವಲ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾತ್ರ ಇಲಾಖೆ ನೀಡುತ್ತಿದೆ. ಪರೀಕ್ಷೆಗಾಗಿ ದೂರದ ಊರುಗಳಿಂದ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಈ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಎಂ. ಕನಗವಲ್ಲಿ ತಿಳಿಸಿದ್ದಾರೆ.
ಕಾಲೇಜುಗಳು ಅಂತಹ ವಿದ್ಯಾರ್ಥಿಗಳನ್ನು ಆದ್ಯತೆಗಳ ಬಗ್ಗೆ ವಿಚಾರಿಸಲು ಕರೆಯುತ್ತವೆ, ಇಲ್ಲವೇ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಕಾಲೇಜುಗಳನ್ನು ಸಂಪರ್ಕಿಸುವ ಮೂಲಕ ತವರು ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ಬಗ್ಗೆ ತಿಳಿಸಬಹುದು ಎಂದವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಆದ್ಯತೆ ತಿಳಿಸಲು ಸಾಕಷ್ಟು ಸಮಯವಕಾಶ ನೀಡಲಾಗುವುದು ಎಂದು ಹೇಳಿದ ಅವರು, ಈ ಬಗ್ಗೆ ಮಾಹಿತಿಯನ್ನು ಒಂದು ವಾರದ ಹಿಂದೆಯೇ ಜಿಲ್ಲಾ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಲಭ್ಯವಿರುವ ಪ್ರಶ್ನೆ ಪತ್ರಿಕೆಗಳ ಸಂಖ್ಯೆ, ತರಗತಿ ಕೊಠಡಿ, ಆಸನಗಳನ್ನು ಮತ್ತಿತರ ಆಧಾರದ ಮೇಲೆ ಪರೀಕ್ಷೆಯ ಪರಿಷ್ಕೃತ ಸ್ಥಳವನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು, ಈ ಬಗ್ಗೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಿದ್ದಾರೆ ಎಂದರು.
ಬಾಕಿ ಇರುವ ಇಂಗ್ಲೀಷ್ ಪತ್ರಿಕೆಯ ಪರೀಕ್ಷೆ ದಿನಾಂಕವನ್ನು ಇಲಾಖೆ ಇನ್ನೂ ಘೋಷಿಸಿಲ್ಲ, ಆದರೆ, ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಸಾಮಾಜಿಕ ಅಂತರ ನಿಯಮ ಖಾತ್ರಿಗಾಗಿ ಹೆಚ್ಚುವರಿ ಆಸನಗಳ ವ್ಯವಸ್ಥೆಗಾಗಿ ಕಟ್ಟಡಗಳ ಗುರುತಿಸುವಿಕೆ ಕಾರ್ಯ ನಡೆಯುತ್ತಿದೆ.
0 comments:
Post a Comment