ಬಂಟ್ವಾಳ ಗ್ರಾಮಾಂತರ ಎಸ್ಸೈ ಮಾನವೀಯ ಸ್ಪಂದನೆಗೆ ಲೈಕ್, ಕಮೆಂಟ್‍ಗಳ ಮಹಾಪೂರ
ಬಂಟ್ವಾಳ (ಕರಾವಳಿ ಟೈಮ್ಸ್) : ಪೊಲೀಸರು ಎಂದಾಕ್ಷಣ ಜನರಲ್ಲಿ ಒಂದು ರೀತಿಯ ಭಿನ್ನ ಆಲೋಚನೆ ಮೂಡುತ್ತದೆ. ಕೆಲವೊಂದು ಖಾಕಿಧಾರಿಗಳ ದರ್ಪ ಹಾಗೂ ಅಮಾನವೀಯ ವರ್ತನೆಗಳೇ ಜನರಲ್ಲಿ ಎಲ್ಲ ಪೊಲೀಸರ ಬಗ್ಗೆಯೂ ಇಂತಹ ಅಭಿಪ್ರಾಯ ಮೂಡಲು ಕಾರಣ. ಆದರೆ ಪೊಲೀಸರಲ್ಲೂ ಬಹುತೇಕ ಮಂದಿ ಮಾನವೀಯ ಮನೋಭಾವ ಇಟ್ಟುಕೊಂಡೇ ಕಾರ್ಯನಿರ್ವಹಿಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇದ್ಯಾವುದೂ ಸುದ್ದಿಯಾಗುವುದೇ ಇಲ್ಲ ಅಷ್ಟೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಪ್ರಸನ್ನ ಅವರದ್ದು ಸದಾ ಭಿನ್ನ ಶೈಲಿ. ಅಹಂ, ದರ್ಪ, ಇದ್ಯಾವುದರಿಂದಲೂ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಎಸ್ಸೈ ಪ್ರಸನ್ನ ಅವರು ಸದಾ ಜನಸ್ನೇಹಿ ಅಧಿಕಾರಿಯಾಗಿ ಜನರ ಮನಸ್ಸಲ್ಲಿ ಸ್ಥಾನ ಪಡೆದವರು.
ಲಾಕ್‍ಡೌನ್ ಆರಂಭದಿಂದಲೂ ವಲಸೆ ಕಾರ್ಮಿಕರ ಬಗ್ಗೆ ಅತೀವ ಕಾರುಣ್ಯ ಪ್ರದರ್ಶಿಸುತ್ತಿರುವ ಎಸ್ಸೈ ಪ್ರಸನ್ನ ಅದೆಷ್ಟೋ ವಲಸೆ ಕಾರ್ಮಿಕರ ಪಾಲಿಗೆ ಅನ್ನದಾತರಾಗಿ, ಸಾಂತ್ವನದ ಚಿಲುಮೆಯಾಗಿ ಕಾರ್ಯನಿರ್ವಹಿಸಿದ್ದು ಎಲ್ಲರಿಗೂ ಗೊತ್ತಿದೆ. ತನ್ನ ಕೈಯಲ್ಲಿ ಆಗದಿದ್ದರೂ ಕೆಲವೊಮ್ಮೆ ಸಾಧ್ಯವಿರುವ ಅನುಕೂಲಸ್ಥರನ್ನು ಸಂಪರ್ಕಿಸಿ ಆ ಮೂಲಕ ನೊಂದವರ ಪಾಲಿಗೆ ಅಗತ್ಯ ಇರುವುದನ್ನು ಒದಗಿಸಿಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಆದರೆ ಇದ್ಯಾವುದಕ್ಕೂ ಪ್ರಚಾರ ಬಯಸುವ ಜಾಯಮಾನ ಅವರದಲ್ಲ.
ಇಂತಹದೇ ಮಾನವೀಯ ಘಟನೆಗೆ ಗುರುವಾರ ಮತ್ತೊಮ್ಮೆ ಎಸ್ಸೈ ಪ್ರಸನ್ನ ಸಾಕ್ಷಿಯಾಗಿದ್ದಾರೆ. ಫರಂಗಿಪೇಟೆ ಜಂಕ್ಷನ್ ಬಳಿ ಪೊಲೀಸ್ ಹೊರಠಾಣೆ ಎದುರುಗಡೆ ಅಪಘಾತ ನಡೆದು ರಸ್ತೆಯಲ್ಲಿ ಬಿದ್ದ ಗಾಯಾಳುವನ್ನು ಸ್ವತಃ ಎಸ್ಸೈ ಪ್ರಸನ್ನ ಉಪಚರಿಸುವ ಫೋಟೋ ಇದೀಗ ಸಾಮಾಜಿಕ ಜಾಲ ತಾಣದಾದ್ಯಂತ ವೈರಲ್ ಆಗುತ್ತಿದೆ. ಪೊಲೀಸ್ ಅಧಿಕಾರಿಯ ಮಾನವೀಯ, ಕಾರುಣ್ಯದ ಸೇವೆಯನ್ನು ಕಂಡು ಬಹುಪರಾಕ್ ವ್ಯಕ್ತಪಡಿಸಿದ ಅದ್ಯಾರೋ ಈ ಸಂದರ್ಭದ ಫೋಟೋ ಕ್ಲಿಕ್ಕಿಸಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಒಂದು ಫೋಟೋ ಇದೀಗ ಜಿಲ್ಲೆಯಲ್ಲೇ ಸಂಚಲನ ಮೂಡಿಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಲೈಕ್, ಕಮೆಂಟ್‍ಗಳು ಪಡೆದುಕೊಳ್ಳುತ್ತಿದೆ. ಅಧಿಕಾರ, ಆಸ್ತಿ-ಅಂತಸ್ತು ಏನಿದ್ದರೂ ಅದೆಲ್ಲವೂ ಕೇವಲ ಕ್ಷಣಿಕವಷ್ಟೆ. ಮಾನವೀಯ ಗುಣ ಪ್ರದರ್ಶಿಸಿ ಆ ಮೂಲಕ ಜನರ ಮನಸ್ಸು ಗೆದ್ದುಕೊಂಡರೆ ಜೀವನದಲ್ಲಿ ಅದಕ್ಕಿಂತ ದೊಡ್ಡ ಆಸ್ತಿ ಬೇರೆ ಯಾವುದೂ ಇಲ್ಲ ಎಂಬ ಸಂದೇಶ ಈ ವೈರಲ್ ಫೋಟೋ ಸಾರಿ ಹೇಳುವಂತಿದೆ.
ಇಂತಹ ಪೊಲೀಸ್ ಅಧಿಕಾರಿಗಳನ್ನು ಹಿರಿಯ ಅಧಿಕಾರಿಗಳು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಇತರರೂ ಇಂತಹ ನಡೆಗಳನ್ನು ಮಾದರಿಯಾಗಿ ಸ್ವೀಕರಿಸುವ ಪೂರಕ ವಾತಾವರಣ ನಿರ್ಮಿಸಿಕೊಡಬೇಕು ಎಂದು ಸಾರ್ವಜನಿಕರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ರಾಜ್ಯದ ಮುಖ್ಯಮಂತ್ರಿ, ಗೃಹ ಮಂತ್ರಿಗಳನ್ನು ಆಗ್ರಹಿಸಿದ್ದಾರೆ.
Great sir.
ReplyDeleteKarnataka police 😍😍
ReplyDelete