ನಿಹಾಲ್ ಪರ್ಲಡ್ಕ |
ಪುತ್ತೂರು (ಕರಾವಳಿ ಟೈಮ್ಸ್) : ತಾಲೂಕಿನ ಪರ್ಲಡ್ಕ ನಿವಾಸಿ, ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲಾ ಎಂಟನೇ ತರಗತಿ ವಿದ್ಯಾರ್ಥಿ ಹಾಗೂ ಪರ್ಲಡ್ಕ ಹಯಾತುಲ್ ಇಸ್ಲಾಂ ಮದ್ರಸದ 8ನೇ ತರಗತಿ ವಿದ್ಯಾರ್ಥಿ ನಿಹಾಲ್ ಕೋವಿಡ್-19 ಸಂಕಷ್ಟದ ಸಮಯದಲ್ಲಿ ತನ್ನ ವೈಜ್ಞಾನಿಕ ಆವಿಷ್ಕಾರದ ಮೂಲಕ ಕೈಯಿಂದ ಸ್ಪರ್ಶಿಸದೆ ಎರಡು ರೀತಿಯಲ್ಲಿ ಸ್ಯಾನಿಟೈಸರ್ ಶ್ಯಾಂಪೂ ಉಪಯೋಗಿಸುವ ಯಂತ್ರವನ್ನು ಸಮಾಜಕ್ಕೆ ಪರಿಚಯಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ವೀಡಿಯೋ ವೀಕ್ಷಿಸಿ
ವೀಡಿಯೋ ವೀಕ್ಷಿಸಿ
ಒಂದು ಯಂತ್ರದ ಮೂಲಕ ಸೆನ್ಸಾರ್ ನಿರ್ಮಿತ ಟ್ಯಾಪ್ ಗೆ ಕೇವಲ ಕೈ ತೋರಿದಾಕ್ಷಣ ಸ್ಯಾನಿಟೈಸರ್ ಹೊರ ಚೆಲ್ಲುವ ಆವಿಷ್ಕಾರವಾದರೆ, ಇನ್ನೊಂದು ಕೈ ಸ್ಪರ್ಶ ಇಲ್ಲದೆ ಕಾಲಿನ ಪಾದರಕ್ಷೆ ಮೂಲಕ ತುಳಿದಾಕ್ಷಣ ಸ್ಯಾನಿಟೈಸರ್ ಶ್ಯಾಂಪೂ ಹೊರಚೆಲ್ಲುವ ಆವಿಷ್ಕಾರ ಮಾಡುವ ಮೂಲಕ ಸಾಂಕ್ರಾಮಿಕ ರೋಗ ಭೀತಿಯ ಸಂದರ್ಭದಲ್ಲಿ ಈತನ ಪ್ರೊಜೆಕ್ಟ್ ಸಮಾಜಕ್ಕೆ ಸಹಕಾರಿಯಾಗಿವೆ.
ಈತನ ನೂತನ ಆವಿಷ್ಕಾರ ಸರಕಾರಿ ಕಛೇರಿಗಳು, ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೈ ಸ್ಪರ್ಶದಿಂದ ತಪ್ಪಿಸಲು ಹೆಚ್ಚು ಪ್ರಯೋಜನವಾಗಲಿವೆ.
ತನ್ನ ಅತೀ ಸಣ್ಣ ವಯಸ್ಸಿನಲ್ಲಿ ಅನೇಕ ಪ್ರಾಜೆಕ್ಟ್ ಮಾಡಿ ತನ್ನ ಸಾಧನೆಯಿಂದ ರಾಜ್ಯ ಪ್ರಶಸ್ತಿ ಗಳಿಸಿರುವ ನಿಹಾಲ್ ಪರ್ಲಡ್ಕ ಇದೀಗ ಹೊಸ ವೈಜ್ಞಾನಿಕ ಆವಿಷ್ಕಾರದ ಮೂಲಕ ಮತ್ತೆ ಸುದ್ದಿಯಾಗಿದ್ದಾನೆ.
ಲಾಕ್ ಡೌನ್ ಸಮಯದಲ್ಲಿ ಮಕ್ಕಳು, ದೊಡ್ಡವರಾದಿಯಾಗಿ ಮೊಬೈಲ್, ಆಟ, ಮೋಜು, ಮಸ್ತಿ ಮೂಲಕ ಸಮಯ ಕಳೆಯುತ್ತಿದ್ದರೆ ಈ ಹೈಸ್ಕೂಲ್ ಹುಡುಗ ಮಾತ್ರ ತನ್ನ ಅತ್ಯಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೇ ವೈಜ್ಞಾನಿಕ ಆವಿಷ್ಕಾರಕ್ಕೆ ಮೀಸಲಿಟ್ಟು ತನ್ನ ಬದ್ದತೆಯನ್ನು ಪ್ರದರ್ಶಿಸಿರುವುದು ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ.
ಸಂಪ್ಯ ಉಮ್ಮರ್ ಕೆ.ಎಂ. ಹಾಗೂ ನಿಶಾ ದಂಪತಿಗಳ ಪುತ್ರನಾಗಿರುವ ಈ ಗ್ರಾಮೀಣ ಪ್ರದೇಶದ ಹೈಸ್ಕೂಲ್ ಹುಡುಗ ತನ್ನ ಸಣ್ಣ ಪ್ರಾಯದಲ್ಲೇ ವೈಜ್ಞಾನಿಕ ಆವಿಷ್ಕಾರಗಳ ಮೂಲಕ ಗಮನ ಸೆಳೆಯುತ್ತಿದ್ದು, ಈತನ ಅಭೂತಪೂರ್ವ ಸಾಧನೆಗೆ ಮನೆ ಮಂದಿ ಹಾಗೂ ಶಾಲಾ ಶಿಕ್ಷಕರ ಪ್ರೋತ್ಸಾಹದ ಜೊತೆಗೆ ಸಮಾಜದ ಹಿರಿಯರ, ಗಣ್ಯರ, ಜನಪ್ರತಿನಿಧಿಗಳ ಸಾಥ್ ಬೇಕಾಗಿದೆ.
ಬೆಳೆಯುತ್ತಿರುವ ಎಳೆಯ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ, ಮನ್ನಣೆ ದೊರೆತಲ್ಲಿ ಗ್ರಾಮೀಣ ಪ್ರದೇಶದ ಹುಡುಗನಲ್ಲಿ ವಿಜ್ಞಾನಿಯ ಕನಸನ್ನೂ ಕಾಣಬಹುದಾಗಿದ್ದು, ಸಮಾಜದ ಪ್ರೋತ್ಸಾಹ ದೊರೆಯಬೇಕಷ್ಟೆ..
0 comments:
Post a Comment