ಬಂಟ್ವಾಳ (ಕರಾವಳಿ ಟೈಮ್ಸ್): ಮೆಲ್ಕಾರ್ ಉಳ್ಳಾಲ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಅನಧಿಕೃತ ಕಟ್ಟಡದ ಮಾಲಕರು ಕಟ್ಟಡದಲ್ಲಿ ಬಾಡಿಗೆಯಲ್ಲಿರುವ ಅಂಗಡಿ ಮಾಲಕ ಯುವಕನ ಮೇಲೆ ತಂಡ ಕಟ್ಟಿಕೊಂಡು ಹಲ್ಲೆ ನಡೆಸಿ ಗೂಂಡಾಗಿರಿ ಮೆರೆದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ತಾತ್ಕಾಲಿಕ ಕಟ್ಟಡದ ಅಂಗಡಿಯೊಂದರಲ್ಲಿ ಹೂವಿನ ವ್ಯಾಪಾರ ನಡೆಸುತ್ತಿರುವ ಪರ್ಲಿಯಾ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಹಬೀಬುಲ್ಲಾ (21) ಎಂಬವನೇ ಹಲ್ಲೆಗೊಳಗಾದ ಯುವಕ. ಕಟ್ಟಡ ಮಾಲಕ ಸೈಫುಲ್ಲಾ, ಆತನ ಪುತ್ರ ಹಾಗೂ ಸಮೀಪದ ಕೋಳಿ ಅಂಗಡಿ ಮಾಲಕ ಅಬುಸಲಿ ಎಂಬವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಮೆಲ್ಕಾರ್ ರಸ್ತೆ ಬದಿಯಲ್ಲಿ ಆರೋಪಿ ಸೈಫುಲ್ಲಾ ನಿರ್ಮಿಸಿರುವ ತಾತ್ಕಾಲಿಕ ಕಟ್ಟಡದ ಅಂಗಡಿಯೊಂದನ್ನು ಬಂಟ್ವಾಳ ನಿವಾಸಿ ನಾಸಿರ್ ಎಂಬವರು ಖರೀದಿಸಿ ಅದನ್ನು ಹಬೀಲುಲ್ಲಾರಿಗೆ ಹೂವಿನ ವ್ಯಾಪಾರಕ್ಕಾಗಿ ಬಾಡಿಗೆ ನಿಗದಿಪಡಿಸಿ ನೀಡಿದ್ದರು. ಈ ಅಂಗಡಿಯ ಹೊರಭಾಗದಲ್ಲಿ ಹಬೀಬುಲ್ಲಾ ಹೂವಿನ ಬಾಕ್ಸ್ ಒಂದನ್ನು ಇಟ್ಟಿರುವ ಬಗ್ಗೆ ಏಕಾಏಕಿ ಬಂದು ಪ್ರಶ್ನಿಸಿದ ಮಾಲಕ ಸೈಫುಲ್ಲಾ ತನ್ನ ಪುತ್ರ ಹಾಗೂ ಅಬುಸಲಿ ಜೊತೆ ಸೇರಿಕೊಂಡು ಹಿಗ್ಗಾ ಮುಗ್ಗಾ ಸಾರ್ವಜನಿಕರ ಸಮ್ಮುಖದಲ್ಲೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಗಂಭೀರ ಗಾಯಗೊಂಡ ಹಬೀಬುಲ್ಲಾ ಈ ಬಗ್ಗೆ ಆರೋಪಿಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಎಸಿ ತೆರವು ಆದೇಶದ ಹೊರತಾಗಿಯೂ ಅನಧಿಕೃತ ಅಂಗಡಿ ಕಾರ್ಯಾಚರಣೆ
ಮೆಲ್ಕಾರ್ ಉಳ್ಳಾಲ ರಸ್ತೆಯಲ್ಲಿರುವ ಡಬಲ್ ಟ್ಯಾಕ್ಸ್ ಹೊಂದಿ ತಾತ್ಕಾಲಿಕ ನೆಲೆಯ ಪರವಾನಿಗೆ ಪಡೆದುಕೊಂಡು ಕಾರ್ಯಾಚರಿಸುತ್ತಿರುವ ಈ ಅಂಗಡಿಗಳ ಪರವಾನಿಗೆ ಅವಧಿ ಮುಕ್ತಾಗೊಂಡಿದ್ದು, ಆದರೂ ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಇತ್ತೀಚೆಗೆ ಮಂಗಳೂರು ಸಹಾಯಕ ಆಯುಕ್ತರು ಈ ಎಲ್ಲಾ ಅಂಗಡಿಗಳ ತೆರವಿಗೆ ಆದೇಶ ನೀಡಿದ್ದರೂ ತೆರವಿಗೆ ಪುರಸಭೆ ಇನ್ನೂ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಲಾಗಿದೆ. ಇಲ್ಲಿನ ಅನಧಿಕೃತ ಅಂಗಡಿಗಳಿಂದಾಗಿ ಬಹಳಷ್ಟು ಸಮಸ್ಯೆಗಳು ಉದ್ಭವವಾಗುತ್ತಿದೆ ಎಂದು ಸ್ಥಳೀಯರು ಈಗಾಗಲೇ ಸಾಕಷ್ಟು ಬಾರಿ ಪುರಸಭಾಧಿಕಾರಿಗಳಿಗೆ ದೂರಿಕೊಂಡಿದ್ದಾರೆ. ಇಲ್ಲಿರುವ ಮೀನು ಮಾರುಕಟ್ಟೆಯಿಂದ ತ್ಯಾಜ್ಯ ನೀರು ರಸ್ತೆಗೆ ಹರಿದು ಬರುತ್ತಿದ್ದು, ಅಲ್ಲದೆ ಇಲ್ಲಿನ ಚರಂಡಿಯನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿರುವುದರಿಂದ ಅದರಿಂದಲೂ ಸಮಸ್ಯೆ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣಕ್ಕೆ ತಾತ್ಕಾಲಿಕ ಪರವಾನಿಗೆ ನೀಡುವ ಸಂದರ್ಭ ರಸ್ತೆ ಬದಿ ಬಿಟ್ಟು ನಿರ್ಮಿಸುವಂತೆ ನಿಯಮ ಸೂಚಿಸಿದ್ದರೂ ಅದನ್ನು ಮೀರಿ ಕಟ್ಟಡ ನಿರ್ಮಿಸಿರುವುದರಿಂದ ಇಲ್ಲಿನ ಪಾರ್ಕಿಂಗ್ ಸಮಸ್ಯೆಯೂ ಉಂಟಾಗಿದೆ. ವಾಹನಗಳು ರಸ್ತೆಯಲ್ಲೇ ಪಾರ್ಕಿಂಗ್ ಮಾಡುವುದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆಗಳೂ ಉಂಟಾಗುತ್ತಿದೆ. ಇಲ್ಲಿನ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಎಸಿ ಆದೇಶ ಜಾರಿ ಮಾಡಿದಲ್ಲಿ ಇಲ್ಲಿ ವಾಹನ ಪಾಕಿಂಗ್, ಬಸ್ ತಂಗುದಾಣ ಮೊದಲಾದ ಜನರ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ. ಈ ಬಗ್ಗೆ ಪುರಸಭಾಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಮೆಲ್ಕಾರ್ ನಿವಾಸಿಗಳು ಪುರಸಭಾಧಿಕಾರಿಗಳು ಹಾಗೂ ಸ್ಥಳೀಯ ಕೌನ್ಸಿಲರ್‍ಗಳಿಗೂ ಒತ್ತಾಯಿಸುತ್ತಲೇ ಬರುತ್ತಿದ್ದಾರೆ.
0 comments:
Post a Comment