ಎನ್‍ಒಸಿ ಇಲ್ಲದಿದ್ದರೂ ಜನವಸತಿ ಪ್ರದೇಶದಲ್ಲಿ ಕಾಂಕ್ರಿಟ್ ಮಿಕ್ಸಿಂಗ್ ಘಟಕಕ್ಕೆ ಕಾನೂನು ಬಾಹಿರ ಅನುಮತಿ
ಜಿಲ್ಲಾಧಿಕಾರಿ ತಕ್ಷಣ ಮಧ್ಯಪ್ರವೇಶಿಸದಿದ್ದರೆ ಬೀದಿಗಿಳಿದು ಹೋರಾಟ : ಗ್ರಾಮಸ್ಥರ ಎಚ್ಚರಿಕೆ
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ನಬೈಲ್ ಎಂಬಲ್ಲಿ ಖಾಸಗಿ ಜಮೀನಿನಲ್ಲಿ ಯಾವುದೇ ಇಲಾಖೆಗಳ ಎನ್.ಒ.ಸಿ. ಇಲ್ಲದಿದ್ದರೂ ಪಂಚಾಯತ್ ಅನುಮತಿ ದಯಪಾಲಿಸಿದ ಹಿನ್ನಲೆಯಲ್ಲಿ ಕಾಂಕ್ರಿಟ್ ಮಿಕ್ಸಿಂಗ್ ಘಟಕವೊಂದು ಕಾರ್ಯಾಚರಣೆ ಆರಂಭಿಸಿದ ಪರಿಣಾಮ ಬವಣೆ ಹಾಗೂ ಯಾತನಾಮಯ ಬದುಕು ನಡೆಸುವ ಅನಿವಾರ್ಯತೆ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಪಾಲಿಗೆ ಬಂದೊದಗಿದೆ ಎಂದು ದೂರಿರುವ ಸ್ಥಳೀಯರು ಪಂಚಾಯತ್ ಪಿಡಿಒ ಹಾಗೂ ಅಧ್ಯಕ್ಷರ ದರ್ಪದ ವರ್ತನೆ ವಿರುದ್ದ ಬೀದಿಗಿಳಿದು ಹೋರಾಟ ನಡೆಸುವ ಸಿದ್ದತೆ ನಡೆಸುತ್ತಿದ್ದಾರೆ.
ಖಾಸಗಿ ಕಂಟ್ರಾಕ್ಟುದಾರರು ಮಾರ್ನಬೈಲಿನಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಜಮೀನನ್ನು ಲೀಸ್‍ಗೆ ಪಡೆದುಕೊಂಡು ಈ ಕಾಂಕ್ರಿಟ್ ಮಿಕ್ಸಿಂಗ್ ಘಟಕವನ್ನು ತಿಂಗಳುಗಳ ಹಿಂದೆ ಆರಂಭಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಈ ಘಟಕಕ್ಕೆ ಪರಿಸರ ಹಾಗೂ ಆರೋಗ್ಯ ಇಲಾಖೆ ಎನ್.ಒ.ಸಿ. ನೀಡದಿದ್ದರೂ ಪರವಾನಿಗೆ ನೀಡಿದ್ದಲ್ಲದೆ ಘಟಕ ಗ್ರಾಮಸ್ಥರ ತೀವ್ರ ವಿರೋಧದ ಹೊರತಾಗಿಯೂ ಕಾರ್ಯಾಚರಣೆಗೂ ಅನುವು ಮಾಡಿಕೊಟ್ಟಿದೆ. ಲಾಕ್‍ಡೌನ್ ಮೊದಲೇ ಘಟಕ ಆರಂಭಗೊಂಡಿದ್ದು, ಲಾಕ್‍ಡೌನ್ ಸಂದರ್ಭ ಕೆಲದಿನ ಸ್ಥಗಿತಗೊಳಿಸಲಾಗಿತ್ತು. ಬಳಿಕ ಲಾಕ್‍ಡೌನ್ ಸಂಪೂರ್ಣ ಸರಳಗೊಳ್ಳುವುದಕ್ಕಿಂತಲೂ ಮೊದಲೇ ಮತ್ತೆ ಕಾರ್ಯಾಚರಣೆ ಆರಂಭಗೊಂಡಿದೆ. ಆದರೆ ಇದೀಗ ಪಂಚಾಯತ್ ನೀಡಿದ ಪರವಾನಿಗೆಯೂ ನಿಯಮಗಳಂತೆ ಕಂಟ್ರಾಕ್ಟುದಾರರು ನಡೆದುಕೊಳ್ಳದ ಪರಿಣಾಮ ಲ್ಯಾಪ್ಸ್ ಆಗಿದೆ. ಆದರೂ ಘಟಕ ಕಾರ್ಯಾಚರಣೆ ನಡೆಸುತ್ತಲೇ ಇದೆ. ಪಂಚಾಯತ್ ಅಧ್ಯಕ್ಷರಾಗಲೀ, ಪಿಡಿಒ ಅವರಾಗಲೀ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಡವರ ವಿರುದ್ದ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸುವ ಆಡಳಿತ ಹಾಗೂ ಅಧಿಕಾರಿಗಳು ದೊಡ್ಡವರ ವಿರುದ್ದ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವ ಹಿಂದಿನ ಉದ್ದೇಶವೇನು ಎಂದು ಸಾರ್ವಜನಿಕರ ಪ್ರಶ್ನಿಸಿದ್ದಾರೆ.
ಘಟಕ ಆರಂಭವಾದಾಗಿನಿಂದ ಇಲ್ಲಿಗೆ ನಿರಂತರ ಜಲ್ಲಿ ಹಾಗೂ ಕಾಂಕ್ರಿಟ್ ಹೊತ್ತ ಟಿಪ್ಪರ್, ಲಾರಿ ಸಹಿತ ಇನ್ನಿತರ ವಾಹನಗಳು ಎಗ್ಗಿಲ್ಲದೆ ಸಂಚಾರ ನಡೆಸುತ್ತಿದ್ದು, ಪರಿಣಾಮ ಇಲ್ಲಿನ ರಾಜ್ಯ ಹೆದ್ದಾರಿಗೆ ಹಾನಿ ಸಂಭವಿಸುತ್ತಲೇ ಇದೆ. ಅಲ್ಲದೆ ಈ ಲಾರಿಗಳ ಸಂಚಾರದಿಂದಾಗಿ ಸ್ಥಳೀಯವಾಗಿ ಧೂಳಿನ ಸಮಸ್ಯೆ ವಿಪರೀತವಾಗಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಪರಿಸರದಲ್ಲಿ ಧಾರ್ಮಿಕ ಕೇಂದ್ರಗಳು, ಶಾಲೆ, ಅಂಗನವಾಡಿ, ಮದ್ರಸಗಳು ಕೂಡಾ ಕಾರ್ಯಾಚರಿಸುತ್ತಿದ್ದು, ಇಲ್ಲಿಗೆ ಬರುವ ಮಕ್ಕಳ ಸಹಿತ ಹಿರಿಯರಿಗೆ ಹಾಗೂ ಸಾರ್ವಜನಿಕರಿಗೂ ತೊಂದರೆಯಾಗುತ್ತಿದ್ದು, ಅನಾರೋಗ್ಯ ಸಂಬಂಧಿ ಸಮಸ್ಯೆಗಳೂ ತಲೆದೋರುತ್ತಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಸಾಕಷ್ಟು ವಿರೋಧ, ದೂರುಗಳು ಸಲ್ಲಿಕೆಯಾದರೂ ಅವರೆಲ್ಲರನ್ನೂ ರಾಜಕೀಯ ಬಳಸಿ, ರಾಜಕಾರಣ ಬಳಸಿ ನಿಗ್ರಹಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯರು ಸ್ಥಳೀಯ ಶಾಸಕರು, ತಾ ಪಂ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿದ್ದಾರೆ. ಆದರೂ ಕೆಲವೊಂದು ಕಾರಣಗಳಿಗಾಗಿ ಕ್ರಮಕ್ಕೆ ಹಿಂಜರಿಯಲಾಗುತ್ತದೆ ಎನ್ನಲಾಗುತ್ತಿದೆ. ಇದೀಗ ಗ್ರಾಮಸ್ಥರು ಘಟಕದ ವಿರುದ್ದ ಬೀದಿಗಿಳಿದು ಹೋರಾಟಕ್ಕೆ ಸಿದ್ದತೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಸ್ಥಗಿತಗೊಳಿಸಲು ನೋಟೀಸ್ ನೀಡಲಾಗಿದೆ : ಪಿಡಿಒ ಪ್ರಕಾಶ್
ಈ ಬಗ್ಗೆ ಪ್ರತಿಕ್ರಯಿಸಿರುವ ಸಜಿಪಮುನ್ನೂರು ಗ್ರಾ ಪಂ ಪಿಡಿಒ ಪ್ರಕಾಶ್ ಅವರು ಪರಿಸರ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಎನ್.ಒ.ಸಿ. ಸಲ್ಲಿಸದಿದ್ದರೂ ಕೆಲವೊಂದು ರಾಜಕೀಯ ಕಾರಣಗಳಿಗಾಗಿ ಘಟಕಕ್ಕೆ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಕರೆದು ಪರವಾನಿಗೆ ನೀಡಲಾಗಿದೆ. ಇದೀಗ ಅದು ಲ್ಯಾಪ್ಸ್ ಆಗಿದ್ದು, ಸಂಬಂಧಪಟ್ಟವರಿಗೆ ತಕ್ಷಣ ಸ್ಥಗಿತಗೊಳಿಸುವಂತೆ ನೋಟೀಸು ನೀಡಲಾಗಿದೆ. ಆದರೂ ಘಟಕದ ಮಂದಿ ಪ್ರಭಾವಿಳಾಗಿದ್ದು, ನೋಟೀಸ್ಸಿಗೆ ಕ್ಯಾರೇ ಅನ್ನುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಕೇಳಿ ಎಂದಿದ್ದಾರೆ.
ವಿನಂತಿ ಮೇರೆಗೆ ಅನುಮತಿ ನೀಡಲಾಗಿದೆ, ಉಳಿದದ್ದು ಪಿಡಿಒಗೆ ಬಿಟ್ಟದ್ದು : ಅಧ್ಯಕ್ಷ
ಘಟಕದ ಮುಖ್ಯಸ್ಥರ ವಿನಂತಿಗೆ ಮೇರೆಗೆ ಘಟಕ ಕಾರ್ಯಾಚರಣೆಗೆ ಪಂಚಾಯತ್ ವತಿಯಿಂದ ಅನುಮತಿ ನೀಡಲಾಗಿದೆ. ಇದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಪಡೆದುಕೊಳ್ಳುವ ಅಧಿಕಾರ ಪಿಡಿಒ ಅವರಿಗೆ ಬಿಟ್ಟದ್ದು, ಈ ಬಗ್ಗೆ ಪಿಡಿಒ ಅವರಿಗೆ ಸಂಪರ್ಕಿಸಿ ಎಂದು ಪ್ರತಿಕ್ರಯಿಸಿದ್ದಾರೆ.
ಲಿಖಿತ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು : ಇಒ
ಈ ಬಗ್ಗೆ ಈಗಾಗಲೆ ಪಿಡಿಒ ಅವರಿಂದ ವರದಿ ಕೇಳಲಾಗಿದ್ದು, ಎನ್‍ಇಸಿ ರಹಿತವಾಗಿ ಘಟಕ ಕಾರ್ಯಾಚರಣೆ ನಡೆಸುತ್ತಿರುವುದು ತಿಳಿದು ಬಂದಿದೆ. ದೂರುದಾರರು ಲಿಖಿತವಾಗಿ ದೂರು ನೀಡಿದರೆ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ಬಂಟ್ವಾಳ ತಾ ಪಂ ಇಒ ರಾಜಣ್ಣ ಹೇಳಿದ್ದಾರೆ.
ಒಟ್ಟಿನಲ್ಲಿ ನಿಯಮ ಮೀರಿ ಹಾಗೂ ಜನರ ಹಿತಾಸಕ್ತಿಗೆ ಮಾರಕವಾಗಿ ಕಾರ್ಯಾಚರಣೆ ನಡೆಸುತ್ತಿರುವ ಘಟಕದ ಬಗ್ಗೆ ಎಲ್ಲರೂ ತಿಳಿದುಕೊಂಡಿದ್ದರೂ ಲ್ಯಾಪ್ಸ್ ಆದ ಪರವಾನಿಗೆಯೊಂದಿಗೆ ಇನ್ನೂ ಕಾರ್ಯಾಚರಣೆ ಮುಂದುವರಿಯುತ್ತಿರುವುದೇ ಸಂಶಯಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
0 comments:
Post a Comment