ಮಂಗಳೂರು (ಕರಾವಳಿ ಟೈಮ್ಸ್) : ಕೋವಿಡ್ ಲಾಕ್‍ಡೌನ್‍ನಿಂದ ಯುಎಇ ದೇಶದ ದುಬೈಯಲ್ಲಿ ಸಂಕಷ್ಟಕ್ಕೀಡಾಗಿದ್ದ ಸುಮಾರು 177 ಮಂದಿ ಕರಾವಳಿಯ ಪ್ರಯಾಣಿಕರ ಮೊದಲ ತಂಡ ಕೊನೆಗೂ ಮಂಗಳವಾರ ರಾತ್ರಿ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಸುಮಾರು 2 ತಿಂಗಳ ಸಂಕಷ್ಟದ ಬಳಿಕ ಅಬ್ಬಾ ತಾಯ್ನಾಡು ಸೇರಿ ನಿಟ್ಟುಸಿರು ಬಿಟ್ಟೇವು ಎನ್ನುವಷ್ಟರಲ್ಲಿ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇನ್ನಷ್ಟು ಸಂಕಷ್ಟದ ಅನುಭವವಾಗಿದೆ. ರಾತ್ರಿ ಸುಮಾರು 10.10ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದ ಪ್ರಯಾಣಿಕರು ಕನಿಷ್ಠ ಕುಡಿಯುವ ನೀರಿಗೂ ತಾತ್ವಾರಪಟ್ಟು ಬೆಳಗ್ಗಿನ ಜಾವದವರೆಗೂ ನಿಲ್ದಾಣದಲ್ಲೇ ಕಳೆಯುವಂತಹ ವಿಚಿತ್ರ ಸನ್ನಿವೇಶ ನಿರ್ಮಾಣವಾಗಿತ್ತು.
ಸರಕಾರ ವಿದೇಶದಲ್ಲಿನ ಕನ್ನಡಿಗರನ್ನು ಕರೆತರುವ ಏರ್‍ಲಿಫ್ಟ್‍ಗೆ ಅವಕಾಶ ನೀಡಿ ಜನರ ರಕ್ಷಣೆಗೆ ವ್ಯವಸ್ಥೆಯನ್ನೇನೋ ಮಾಡಿತ್ತು. ಅದರಂತೆ ಗೊತ್ತುಪಡಿಸಿದ ದಿನಾಂಕದಂದು ನಿಗದಿಪಡಿಸಿದ ಸಮಯಕ್ಕೆ ವಿಮಾನವೂ ಲ್ಯಾಂಡ್ ಆಗಿದೆ. ಆದರೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಂಪೂರ್ಣ ವಿಫಲವಾದ ಹಿನ್ನಲೆಯಲ್ಲಿ ಅನ್ನಾಹಾರ-ಪಾನೀಯವಿಲ್ಲದೆ ಚಡಪಡಿಸುವ ಜಂಜಾಟ ಪ್ರಯಾಣಿಕರ ಪಾಲಿಗೆ ಬಂದೊದಗಿತ್ತು.
ಮಂಗಳೂರು ವಿಮಾನ ನಿಲ್ದಾಣ ಕಳೆದ ಕೆಲವು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಗೆ ಸುದ್ದಿಯಾಗುತ್ತಿದ್ದು, ಇದೀಗ ವಿಶೇಷ ಸಂದರ್ಭದಲ್ಲೂ ಪ್ರಯಾಣಿಕರಿಗೆ ಸೂಕ್ತ ರಕ್ಷಣೆ, ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗುವ ಮೂಲಕ ಮತ್ತೆ ಸುದ್ದಿಯಾಗಿದೆ. ಗರ್ಭಿಣಿ ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಈ ಅವ್ಯವಸ್ಥೆಯಿಂದಾಗಿ ತೀವ್ರ ಸಂಖಷ್ಟ ಅನುಭವಿಸುವಂತಾಗಿದೆ. ಈ ಪೈಕಿ ಮುಸ್ಲಿಂ ಪ್ರಯಾಣಿಕರಂತೂ ಅನ್ನಾಹಾರ-ಪಾನೀಯದ ವ್ಯವಸ್ಥೆಯಿಲ್ಲದೆ ನಿರಂತರ ಎರಡು ದಿನ ಉಪವಾಸ ಆಚರಿಸುವ ಸಂಧಿಗ್ಧತೆ ಎದುರಾಗಿದೆ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ಘಟನೆಯೂ ನಡೆದಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದ ಹೈಡ್ರಾಮದ ಕೆಲ ವೀಡಿಯೋ ತುಣುಕುಗಳು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದ್ದು, ಜಿಲ್ಲಾಡಳಿತದ ವೈಫಲ್ಯ ಜಗತ್ತಿನ ಮುಂದೆ ಅನಾವರಣಗೊಂಡಿದೆ.
0 comments:
Post a Comment