ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ಲಾಕ್‍ಡೌನ್‍ನಿಂದ ದೇಶದಲ್ಲಿ ಒಂದು ರೀತಿಯ ಹೆಲ್ತ್ ಎಮರ್ಜೆನ್ಸಿ ಜಾರಿಯಲ್ಲಿರುವ ಸಂದರ್ಭ ಸರಕಾರದ ವಿವಿಧ ಕ್ರಮಗಳ ಹೊರತಾಗಿಯೂ ವಲಸೆ ಕಾರ್ಮಿಕರು ತಮ್ಮ ಮೂಲಸ್ಥಾನ ಸೇರಕೊಳ್ಳಲು ಹರಸಾಹಸ ಪಡುವಂತಾಗಿದೆ.
ಇಂತಹ ಸಂಧಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದ ಮಂಗಳೂರಿನ ಕೆಲ ವಲಸೆ ಕಾರ್ಮಿಕರು ವ್ಯವಸ್ಥೆ ಆಗುವುದು ಕಂಡು ಬಾರದ ಹಿನ್ನಲೆಯಲ್ಲಿ ಆಕ್ರೋಶಗೊಂಡು ಮಂಗಳೂರಿನಿಂದ ಜಾರ್ಖಂಡ್‍ಗೆ ಕಾಲ್ನಡಿಗೆಯಿಂದ ಹೊರಟು ಬಂದ ವೇಳೆ ಫರಂಗಿಪೇಟೆ ಸಮೀಪದ ಅರ್ಕುಳದಲ್ಲಿ ಪೆÇಲೀಸರು ತಡೆದು ಮನವೊಲಿಸಲು ಪ್ರಯತ್ನ ಪಟ್ಟರೂ ಯಶಸ್ವಿಯಾಗದ ಘಟನೆ ಬುಧವಾರ ನಡೆದಿದೆ.
ಕೊನೆಗೂ ಪೊಲೀಸರು ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ ಕಾರ್ಮಿಕರು ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ವಾಸ್ತವ್ಯ ಮಾಡಲು ಒಪ್ಪಿಕೊಂಡರು. ಸ್ಥಳಕ್ಕಾಗಮಿಸಿದ ಶಾಸಕ ವೇದವ್ಯಾಸ್ ಕಾಮತ್ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದರು. ಇದೇ ವೇಳೆ ಸ್ಥಳೀಯರ ನೇತೃತ್ವದಲ್ಲಿ ಕಾರ್ಮಿಕರಿಗೆ ಹಣ್ಣು-ಹಂಪಲುಗಳ ವಿತರಣೆ ಮಾಡಲಾಯಿತು.
ಈ ಸಂದರ್ಭ ಹಾಶಿರ್ ಪೇರಿಮಾರ್, ನಝೀರ್ ಹತ್ತನೇ ಮೈಲ್ ಕಲ್ಲು, ಝಹೂರ್, ಖಾದರ್ ಅಮೆಮಾರ್, ನಿಸಾರ್ ವಳವೂರು, ಇರ್ಫಾನ್ ತುಂಬೆ, ಮೂಸಬ್ಬ ತುಂಬೆ, ಬಶೀರ್ ಅಮೆಮ್ಮಾರ್, ಶೆರೀಫ್ ಕುಂಪನಮಜಲ್, ಅನ್ಸಾರ್ ಅಮೆಮ್ಮಾರ್, ಅಝರ್ ಪೇರಿಮಾರ್, ಅಶ್ಫಾಕ್ ಅಮೆಮ್ಮಾರ್ ಕಾರ್ಮಿಕರ ನೆರವಿಗೆ ಸಹಕರಿಸಿದರು.
ಇದೇ ವೇಳೆ ಮಾತನಾಡಿದ ಎಸ್ಡಿಟಿಯು ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಅವರು ಲಾಕ್‍ಡೌನ್ ಸಂದರ್ಭದಲ್ಲಿ ಸರಕಾರ, ಜಿಲ್ಲಾಡಳಿತ ಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿ ಕೊರೋನ ವೈರಸ್‍ಗಿಂತಲೂ ಭಯಾನಕವಾಗಿದೆ. ಕಾರ್ಮಿಕರ ಬೆವರಿನಲ್ಲಿ ದೇಶದ ಅಭಿವೃದ್ಧಿ ಇದೆ ಮಾತ್ರವಲ್ಲ ಕಾರ್ಮಿಕರು ದೇಶದ ಸಂಪತ್ತಾಗಿದ್ದಾರೆ. ಆದರೆ ಸರಕಾರ ಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿ ಮಾತ್ರ ಮನುಷ್ಯ ವಿರೋಧಿಯಾಗಿದೆ. ಸರಕಾರ ಈ ಕೂಡಲೆ ಎಲ್ಲಾ ವಲಸೆ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸಿ ಕಾರ್ಮಿಕರಿಗೆ ಬದುಕಲು ಅವಕಾಶ ಕೊಟ್ಟು, ಅವರ ಸುರಕ್ಷತೆಯ ಬಗ್ಗೆ ಖಾತರಿ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
0 comments:
Post a Comment