ಬಂಟ್ವಾಳ (ಕರಾವಳಿ ಟೈಮ್ಸ್) : ಕಲ್ಲಡ್ಕದ ಹಿಂದೂ ಯುವಕ ಭಾನುವಾರ ನೇತ್ರಾವತಿಗೆ ಹಾರಿದ್ದ ಸಂದರ್ಭ ಅವರ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ನದಿಗೆ ಧುಮುಕಿ ಜೀವ ಉಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದ ಗೂಡಿನ ಬಳಿಯ ಐದು ಮಂದಿ ಯುವಕರಿಗೆ ಬಂಟ್ವಾಳ ಜೇಸಿಐ ವತಿಯಿಂದ ಸೋಮವಾರ ಗೌರವ ಸಲ್ಲಿಸಲಾಯಿತು.
ಭಾನುವಾರದ ರಕ್ಷಣಾ ಕಾರ್ಯಚರಣೆಯನ್ನು ಕಣ್ಣಾರೆ ಕಂಡ ಜೆಸಿಐ ಬಂಟ್ವಾಳದ ಅಧ್ಯಕ್ಷ ಸದಾನಂದ ಬಂಗೇರ ಯುವಕರ ಮಾನವೀಯ ಕಾರ್ಯವನ್ನು ಅಭಿನಂಧಿಸಿ ಕೃತಜ್ಞತೆ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲ ಎನ್ನುವ ಮನೋಭಾವನೆಯಿಂದ ಈ ಯುವಕರು ಪ್ರಾಣದ ಹಂಗು ತೊರೆದು ನದಿಗೆ ಹಾರಿ ಯುವಕನ ರಕ್ಷಣೆಗೆ ಪ್ರಯತ್ನಿಸಿರುವುದು ಅಭಿನಂದನೀಯ. ಇಂತಹ ಮಾನವೀಯ ಮನೋಭಾವ ಹೊಂದಿದವರನ್ನು ಗೌರವಿಸುವುದು ನಾಗರೀಕ ಸಮಾಜದ ಕರ್ತವ್ಯ ಎಂದರು.
ಈ ಸಂದರ್ಭ ಜೇಸಿಐ ಬಂಟ್ವಾಳದ ಸದಸ್ಯರಾದ ನಾಗೇಶ್ ಬಾಳೆಹಿತ್ಲು, ಸುರೇಶ್ ಕುಮಾರ್ ನಾವೂರು, ಸಂದೀಪ್ ಸಾಲ್ಯಾನ್, ಯತೀಶ್ ಕರ್ಕೆರಾ, ಉಮೇಶ್ ಮೂಲ್ಯ, ಗಣೇಶ್ ಕುಲಾಲ್, ವಿಜಯ ಕುಲಾಲ್, ರೋಷನ್ ರೈ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment