ಬಂಟ್ವಾಳ (ಕರಾವಳಿ ಟೈಮ್ಸ್) : ಇರಾ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ನಿವೇಶನ ರಹಿತರಿಗೆ ಇಲ್ಲಿನ ಖಂಡತಟ್ಟು ಎಂಬಲ್ಲಿ ಮೀಸಲಿರಿಸಿದ 12 ಎಕರೆ ಜಮೀನಿನಲ್ಲಿ ಇರಾ ಗ್ರಾಮದ 174 ಮಂದಿ ನಿವೇಶನ ರಹಿತ ಬಡವರಿಗೆ ಹಂಚುವಿಕೆ ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯತ್ ಅನುದಾನದಲ್ಲಿ ಸಮತಟ್ಟು ಕಾಮಗಾರಿ ಪ್ರಗತಿಯಲ್ಲಿದೆ. ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುತ್ತಿಗೆದಾರರಾದ ಫಯಾಝ್ ಮುಡಿಪು ಅವರು ಈ ಸಮತಟ್ಟು ಕಾಮಗಾರಿಯನ್ನು ವಹಿಸಿಕೊಂಡಿದ್ದಾರೆ.
ಮಂಗಳೂರು ಶಾಸಕ ಯು.ಟಿ. ಖಾದರ್ ಅವರ ವಿಶೇಷ ಅನುದಾನದಲ್ಲಿ ಈಗಾಗಲೇ ನಿವೇಶನದ ಜಮೀನು ಸಂಪರ್ಕಕ್ಕೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವಲ್ಲಿ ಸಹಕರಿಸಿದ್ದು, ರಸ್ತೆ ಕಾಂಕ್ರಿಟೀಕರಣ ಪೂರ್ಣಗೊಂಡಿದೆ.
ಉಳಿದಂತೆ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಕೂಡಾ ಮಾಡಲಾಗುತ್ತಿದ್ದು, ಈ ಬಗ್ಗೆ ಸ್ಥಳೀಯ ಜಿ ಪಂ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅವರುಗಳು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
ಕಂದಾಯ ಇಲಾಖೆಗಳ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಸಹಕಾರದಿಂದ ಬಡ ಜನರಿಗೆ ನಿವೇಶನ ಒದಗಿಸಲು ಮಾದರಿ ಲೇಔಟ್ ನಿರ್ಮಿಸಲು ಎಲ್ಲಾ ಸಿದ್ದತೆಗಳು ನಡೆಯುತ್ತಿದೆ. ಈ ಎಲ್ಲಾ ಕಾಮಗಾರಿ ಹಾಗೂ ಯೋಜನೆಗಳ ಬಗ್ಗೆ ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಿ ಯೋಜನೆಯನ್ನು ಪೂರ್ಣಗೊಳಿಸಿ ಬಡವರಿಗೆ ಹಂಚಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಯು ಟಿ ಖಾದರ್ ಭರವಸೆ ನೀಡಿದ್ದಾರೆ.
ಈ ಮಧ್ಯೆ ಬಡ ಜನರ ಅನುಕೂಲಕ್ಕಾಗಿ ನಡೆಯುತ್ತಿರುವ ನಿವೇಶನ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಕೆಲ ಉದ್ಯಮಗಳು ತಪ್ಪು ಮಾಹಿತಿ ಹರಡಿ ಪರಿಸರದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣಾ ಘಟಕದ ಪಕ್ಕದಲ್ಲಿರುವ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು 8 ಎಕರೆ ಜಮೀನನ್ನು ಇರಾ ಗ್ರಾಮದ ಖಂಡತಟ್ಟುವಿನಲ್ಲಿ ನೀಡಲು ಬಂಟ್ವಾಳ ಪುರಸಭೆಯು ಹುನ್ನಾರ ನಡೆಸುತ್ತಿದೆ ಎಂದು ಗ್ರಾಮ ಪಂಚಾಯತ್ ಆಡಳಿತ ಜಿಲ್ಲಾಧಿಕಾರಿಗಳಿಗೆ ಆಕ್ಷೇಪ ಸಲ್ಲಿಸಿದೆ.
0 comments:
Post a Comment