ಮಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ಲಾಕ್ ಡೌನ್ ಕಾರಣದಿಂದ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರ ತಾಯ್ನಾಡು ಕನಸು ನನಸಾಗಿದ್ದರೂ ಮಂಗಳೂರು ತಲುಪಿದ ಮೊದಲ ಪ್ರಯಾಣಿಕರನ್ನು ಜಿಲ್ಲಾಡಳಿತ ನಡೆಸಿಕೊಂಡ ರೀತಿಯನ್ನು ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಕ್ಕೆ ನಿರಂತರ ಒತ್ತಡವನ್ನು ಹೇರಿ ತಾಯ್ನಾಡು ಯಾತ್ರೆಗೆ ಅವಕಾಶ ಕಲ್ಪಿಸುತ್ತೇವೆ ಎಂಬ ಸೂಚನೆ ನೀಡಿದ ತಕ್ಷಣ ಜಿಲ್ಲೆಯ ಹಲವು ವಿದ್ಯಾ ಸಂಸ್ಥೆಯ ಮುಖ್ಯಸ್ಥರು ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅನಿವಾಸಿಗಳ ಕ್ವಾರಂಟೈನ್ ವ್ಯವಸ್ಥೆಗೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಊರಿನಲ್ಲಿರುವ ವಿದ್ಯಾಸಂಸ್ಥೆಗಳ ಕಟ್ಟಡಗಳನ್ನು ಕ್ವಾರೈಂಟೇನ್ ಆಗಿ ಬಳಸಿಕೊಳ್ಳಲು ಸಹಭಾಗಿತ್ವ ನೀಡುವುದಾಗಿ ತಿಳಿಸಲಾಗಿದೆ.
ಆದರಂತೆ ಜಿಲ್ಲಾಡಳಿತ ಪ್ರಕಟಿಸಿದ ಪಟ್ಟಿಯಲ್ಲಿ ಎರಡು ಹಾಸ್ಟೆಲ್ ಕಟ್ಟಡಗಳ ಹೆಸರನ್ನು ನಮೂದಿಸಲಾಗಿತ್ತು. ಆದರೆ ಸಂಪೂರ್ಣ ಉಚಿತವಾಗಿ ಒದಗಿಸುವುದಾಗಿ ಒಪ್ಪಿಕೊಂಡಿದ್ದ ಸಂಸ್ಥೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೋಟೆಲ್ ಗಳಲ್ಲಿ ಪಾವತಿ ಕಾರನ್ಟೈನ್ ಮಾಡಿಕೊಳ್ಳಲು ಅಸಾಧ್ಯವಿರುವ ಅನಿವಾಸಿ ಕನ್ನಡಿಗರಿಗೆ ಒದಗಿಸುವಲ್ಲಿ ಸಹಕರಿಸಬೇಕು
ಎಂದವರು ಆಗ್ರಹಿಸಿದ್ದಾರೆ.
ಹಲವಾರು ಕಷ್ಟ ನಷ್ಟಗಳನ್ನು ಎದುರಿಸಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಅನಿವಾಸಿಗಳು ಅನಿವಾರ್ಯವಾಗಿ ತಾಯ್ನಾಡಿಗೆ ಯಾತ್ರೆ ಕೈಗೊಂಡಿರುವಾಗ ಅವರ ಬದುಕಿಗೆ ಭರವಸೆಯನ್ನು ನೀಡಬೇಕಾಗಿದ್ದ ಜಿಲ್ಲಾಡಳಿತ ಅವರನ್ನು ಒಂದು ದಿನಕ್ಕೆ 2000 ರೂಪಾಯಿ ನೀಡಿ ಬಲವಂತದ ಹೋಟೆಲ್ ಕ್ವಾರೈಂಟೇನ್ ಪಡೆಯಬೇಕೆಂದು ಹೇಳುವುದರ ಹಿಂದಿರುವ ಕಹಿ ಸತ್ಯವಾದರೂ ಏನು ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ ಎಂದವರು ಹೇಳಿದರು.
ಉಪವಾಸಿಗರಾಗಿ ಬಳಲಿದ್ದ ಪ್ರಯಾಣಿಕರನ್ನು ಅನ್ನ ಪಾನೀಯ ನೀಡದೆ ಅಮಾನವೀಯವಾಗಿ ನಡೆಸಿಕೊಂಡ ರೀತಿ ಬಗ್ಗೆ ರಾಜ್ಯವೇ ತಲೆತಗ್ಗಿಸುವಂತಾಗಿದೆ. ಗರ್ಭಿಣಿ ಮಹಿಳೆಯರು, ಮಕ್ಕಳು, ಹಿರಿಯರು ಕುಡಿಯಲು ನೀರು ಕೇಳಿದಾಗ ಅದನ್ನೂ ನೀಡಲು ಸಮರ್ಥ ಸಿಬ್ಬಂದಿಗಳಿಲ್ಲದೆ ಸತಾಯಿಸಿದ್ದು ಜಿಲ್ಲಾಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.
ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಕೆಲಸ ನಷ್ಟ ಹೊಂದಿ, ಅಥವಾ ಉದ್ಯೋಗ ಅರಸಿ ವಿಸಿಟ್ ವೀಸಾಗಳಲ್ಲಿ ಬಂದು ಬರಿಗೈಯಲ್ಲಿ ಹಿಂದಿರುಗುತ್ತಿರುವವರು ದುಬಾರಿ ವಿಮಾನ ಟಿಕೆಟ್ ಖರೀದಿಸಿ ಬರುತ್ತಿರುವುದನ್ನು ಮಾನವೀಯತೆಯಿಂದ ನೋಡಿಕೊಳ್ಳಬೇಕಾಗಿದೆ ಎಂದು ಹಾಶೀರ್ ಪೇರಿಮಾರ್ ಜಿಲ್ಲಾಡಳಿತಕ್ಕೆ ವಿನಂತಿಸಿದ್ದಾರೆ.
0 comments:
Post a Comment