ಹಾಸನ (ಕರಾವಳಿ ಟೈಮ್ಸ್) : ಕಾರ್ಮಿಕ ಸಂಘಟನೆಗಳು ಮತ್ತು ಜನಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ, ರಾಜ್ಯ ಸರಕಾರವು ಬಂಡವಾಳಗಾರರ ಲಾಬಿಗೆ ಮಣಿದು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗಳಿಗೆ ಮತ್ತು ವಾರದ ಕೆಲಸದ ಅವಧಿಯನ್ನು 48 ಗಂಟೆಗಳಿಂದ 60 ಗಂಟೆಗಳಿಗೆ ಹೆಚ್ಚಿಸಿರುವುದನ್ನು ವಿರೋಧಿಸಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‍ಐ) ನೇತೃತ್ವದಲ್ಲಿ ಶುಕ್ರವಾರ ಹಾಸನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಸರಕಾರದ ಆದೇಶ ಪ್ರತಿಯನ್ನು ದಹನ ಮಾಡಿ ಪ್ರತಿಭಟನೆ ನಡೆಸಿ ಸರಕಾರ ತನ್ನ ಆದೇಶವನ್ನು ತಕ್ಷಣ ವಾಪಾಸು ಪಡೆಯುವಂತೆ ಆಗ್ರಹಿಸಲಾಯಿತು.
ರಾಜ್ಯ ಸರಕಾರದ ಈ ಆದೇಶ ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಬದಲು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಲಿದೆ. ಇದು ದುಡಿಯುವ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡುವ ಮತ್ತು ಬಂಡವಾಳದಾರರನ್ನು ಮಾತ್ರವೇ ಸಂಕಷ್ಟದಿಂದ ಮೇಲೆತ್ತುವ ಮತ್ತು ಅವರಿಗೆ ಕಾರ್ಮಿಕರ ದುಡಿಮೆಯನ್ನು ಲೂಟಿ ಮಾಡಲು ಅವಕಾಶ ನೀಡುವ ಕ್ರಮ ಮಾತ್ರವಲ್ಲದೆ ಅಧಿಕಾರ ದುರುಪಯೋಗ ಕೂಡಾ ಆಗಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಮತ್ತು ಕೆಲಸದ ಅವಧಿಯನ್ನು 6 ಗಂಟೆಗೆ ಇಳಿಸಿ, ಯುವ ಜನರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮತ್ತು ಆ ಮೂಲಕ ರಾಜ್ಯದ ಅಭಿವೃದ್ಧಿಗೆ ಕ್ರಮ ವಹಿಸಬೇಕೆಂದು ಸರಕಾರವನ್ನು ಡಿ.ವೈ.ಎಫ್.ಐ ಮುಖಂಡರು ಆಗ್ರಹಿಸಿದರು.
ರಾಜ್ಯ ಸರಕಾರವು ಮೇ 22 ರಂದು ಜಾರಿ ಮಾಡಿರುವ ಅಧಿಸೂಚನೆಯಲ್ಲಿ 2020ರ ಮೇ 22ರಿಂದ ಆಗಸ್ಟ್ 21ರವರೆಗೆ 3 ತಿಂಗಳ ಕಾಲ ರಾಜ್ಯದಲ್ಲಿನ ನೋಂದಾಯಿತ ಕಾರ್ಖಾನೆಗಳಿಗೆ 1948ರ ಕಾರ್ಖಾನೆ ಕಾಯ್ದೆಯ ಕಲಂ 51 ಮತ್ತು 54 ಗಳಿಂದ ವಿನಾಯಿತಿ ನೀಡಿದೆ. ಕಲಂ 54ರಲ್ಲಿನ ವಾರದ ಕೆಲಸದ ಅವಧಿಯನ್ನು ಪ್ರಸ್ತುತ ಇರುವ 48 ಗಂಟೆಗಳಿಂದ 60 ಗಂಟೆಗೆ ಹೆಚ್ಚಳ ಮಾಡಿದೆ ಹಾಗು ಕಲಂ 51 ರಲ್ಲಿನ ದಿನದ ಕೆಲಸದ ಅವಧಿಯನ್ನು ಪ್ರಸ್ತುತ ಇರುವ 8 ಗಂಟೆಗಳಿಂದ 10 ಗಂಟೆಗೆ ಹೆಚ್ಚಳ ಮಾಡಿದೆ. ಈ ದುಡಿಮೆಯ ಸಮಯದ ಹೆಚ್ಚಳವು, ಒಂದೆಡೆ ಕಾರ್ಮಿಕರನ್ನು ಮತ್ತಷ್ಟು ಸುಲಿಗೆಗೆ ಒಳಪಡಿಸಿ ಅವರ ವಿಶ್ರಾಂತಿಯ ಸಮಯವನ್ನು ಕಡಿತಗೊಳಿಸಿದರೆ ಇನ್ನೊಂದೆಡೆ, ಈಗಾಗಲೇ ಪೆಡಂಭೂತವಾಗಿ ಬೆಳೆದು ರಾಜ್ಯಕ್ಕೆ ಮಾರಕವಾಗಿರುವ ನಿರುದ್ಯೋಗಿಗಳ ದೊಡ್ಡ ಪಡೆಗೆ ಉದ್ಯೋಗದಲ್ಲಿರುವ ಲಕ್ಷಾಂತರ ಜನರನ್ನು ಮತ್ತೆ ಹೊಸದಾಗಿ ಸೇರ್ಪಡೆಗೊಳಿಸಲಿದೆ. ನಿರುದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಿದೆ ಎಂದವರು ಆರೋಪಿಸಿದರು.
ಜನಸಾಮಾನ್ಯರು ಹಾಗೂ ದುಡಿಯುವ ವರ್ಗ ದೇಶದಾದ್ಯಂತ ಕೋವಿಡ್- 19ರ ವಿರುದ್ದದ ಹೋರಾಟದ ಸಂಕಷ್ಟದಲ್ಲಿರುವ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು, ಅದರ ಮರೆಯಲ್ಲಿ, ದುಡಿಯುವ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿ, ಕಾಪೆರ್Çೀರೇಟ್ ಬಂಡವಾಳದಾರರ ಹಿತ ರಕ್ಷಣೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೊಡಗಿರುವುದು ಇದು ಹೊಸದೇನಲ್ಲ. ಆದರೆ ಇದು ಸಂಕಷ್ಠದಲ್ಲಿರುವವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿ ಕ್ರೌರ್ಯವೆಸಗುತ್ತಿವೆ. ಇದು ಬಿಜೆಪಿ ಸರಕಾರಗಳ ಜನವಿರೋಧಿ ನಿಲುವನ್ನು ಎತ್ತಿ ತೋರಿಸುತ್ತದೆ ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ, ಜಾಗತಿಕ ಕಾರ್ಮಿಕ ವರ್ಗ ಗಳಿಸಿರುವ 8 ಗಂಟೆಯ ಕೆಲಸದ ಹಕ್ಕನ್ನು ಗೌರವಿಸುವ ಬದಲು, ರಾಜ್ಯದ ಕಾರ್ಮಿಕರಿಂದ ಅದನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ, ರಾಜ್ಯದ ಕಾರ್ಮಿಕರು ಮತ್ತು ಇನ್ನಿತರೆ ದುಡಿಯುವ ವಿಭಾಗದ ಜನರು ಇಂತಹ ಕಾರ್ಮಿಕ ಹಾಗೂ ಜನ ವಿರೋಧಿ ಬಿಜೆಪಿ ಸರಕಾರದ ವಿರುದ್ಧ ತೀವ್ರ ಸಂಘರ್ಷ ನಡೆಸುವ ದಿನಗಳು ಬರಲಿವೆ ಎಂದು ಸರಕಾರಕ್ಕೆ ಡಿವೈಎಫ್‍ಐ ಮುಖಂಡರು ಎಚ್ಚರಿಸಿದರು.
ರಾಜ್ಯದ ಜನರು, ಕಾರ್ಮಿಕ ಸಂಘಟನೆಗಳು, ಜಪರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ, ಇಂತಹ ಕ್ರಮಕ್ಕೆ ತಮ್ಮ ಸರಕಾರ ನಿರಂತರವಾಗಿ ಮುಂದಾಗುತ್ತಿರುವುದು ರಾಜ್ಯದ ಬಿಜೆಪಿ ಸರಕಾರವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಕೊಡುತ್ತಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಕೆಲಸದ ಅವಧಿಯನ್ನು ಕಾರ್ಮಿಕರ ಆರೋಗ್ಯ ಮತ್ತು ಉದ್ಯೋಗಗಳ ರಕ್ಷಣೆಯ ಹಿತ ದೃಷ್ಟಿಯಿಂದ 6 ಗಂಟೆಗೆ ಇಳಿಸಿ, ಯುವಜನರಿಗೆ ಉದ್ಯೋಗ ಸೃಷ್ಟಿಸಿಬೇಕೆಂದು ಮತ್ತು ಸರಕಾರ ಇದೀಗ ಹೊರಡಿಸಿರುವ ಆದೇಶವನ್ನು ವಾಪಾಸು ಪಡೆಯಬೇಕೆಂದು ಡಿವೈಎಫ್‍ಐ ನಾಯಕರು ಒತ್ತಾಯಿಸಿದರು.
ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ.ಜಿ., ರೈತ ಮುಖಂಡರಾದ ವಸಂತ್ ಕುಮಾರ್., ಟಿಪ್ಪು ಸಂಘರ್ಷ ಸಮಿತಿಯ ಮುಬಷಿರ್ ಅಹಮದ್, ಸಯ್ಯದ್ ಅನ್ಸರ್, ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ರಮೇಶ್, ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ರಮೇಶ್, ಮುಖಂಡರಾದ ರಕ್ಷಿತ, ಬಿ.ಜಿ.ವಿ.ಎಸ್.ಬಿ.ಜಿ ಗೋಪಾಲಕೃಷ್ಣ, ಡಿವೈಎಫ್‍ಐ ಮುಂಖಂಡಾದ ಶಶಿ ತಟ್ಟೆಕೆರೆ, ನವೀನ್, ಕಾರ್ತಿಕ್, ಅನಂತ್ ಭರತವಳ್ಳಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment